ಕೊಪ್ಪಳ ನಗರಸಭೆ ಆವರಣದಲ್ಲಿ ಕೊಪ್ಪಳ ಬಚಾವೋ ಆಂದೋಲನ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ವತಿಯಿಂದ ಕಾರ್ಖಾನೆಗಳನ್ನು ತೊಲಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ನಟ ಪ್ರಕಾಶ ರಾಜ್ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಕೊಪ್ಪಳ: ಕೊಪ್ಪಳ ಸೇರಿದಂತೆ ದೇಶದ ವಿವಿಧೆಡೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ವಿದೇಶಿ ಬಂಡವಾಳ ಹರಿದುಬರುತ್ತಿದೆ. ಇಂತಹ ಯೋಜನೆಗಳಿಗೆ ಸರ್ಕಾರಗಳು ಅನುಮತಿ ನೀಡುತ್ತಿರುವುದೇಕೆ? ಎಂಬುದನ್ನು ಪ್ರಶ್ನಿಸುವ ಜತೆಗೆ, ಪರಿಸರ ವಿರೋಧಿ ಕೈಗಾರಿಕೆಗಳ ವಿರುದ್ಧ ದೇಶವ್ಯಾಪಿ ದೊಡ್ಡ ಆಂದೋಲನ ರೂಪಿಸುವ ಅಗತ್ಯವಿದೆ ಎಂದು ನಟ ಪ್ರಕಾಶ ರಾಜ್ ಹೇಳಿದರು.
ನಗರಸಭೆ ಆವರಣದಲ್ಲಿ ಕೊಪ್ಪಳ ಬಚಾವೋ ಆಂದೋಲನ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ವತಿಯಿಂದ ಕಾರ್ಖಾನೆಗಳನ್ನು ತೊಲಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿದರು.ಕೊಪ್ಪಳ, ಅಸ್ಸಾಂ, ಲಡಾಖ್ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ವಿದೇಶಿ ಹೂಡಿಕೆ ಬರುತ್ತಿದೆ. ಇಂತಹ ಕೈಗಾರಿಕೆಗಳಿಗೆ ಹಣಕಾಸು ಎಲ್ಲಿಂದ ಬರುತ್ತಿದೆ? ಅವುಗಳಿಗೆ ಸಾಲ ನೀಡುವ ಹಣಕಾಸು ಸಂಸ್ಥೆಗಳ ಉದ್ದೇಶವೇನು? ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದರು.
ವಿಶ್ವಬ್ಯಾಂಕ್ ಸೇರಿದಂತೆ ಬೃಹತ್ ಹಣಕಾಸು ಸಂಸ್ಥೆಗಳು ಪರಿಸರದ ಮೇಲೆ ಪರಿಣಾಮ ಬೀರುವ ಕೈಗಾರಿಕೆಗಳಿಗೆ ಸಾಲ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ. ಜನರ ಹಣವನ್ನು ಬಳಸಿಕೊಂಡು ಬೃಹತ್ ಯೋಜನೆಗಳಿಗೆ ಸಾಲ ನೀಡಲಾಗುತ್ತಿದ್ದು, ಇಂತಹ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡುತ್ತಿರುವುದರ ಹಿಂದಿನ ಕಾರಣಗಳನ್ನೂ ಜನರು ಪ್ರಶ್ನಿಸಬೇಕಿದೆ ಎಂದು ಹೇಳಿದರು.ಭಾರತದಲ್ಲೇ ಏಕೆ?: ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ನ್ಯೂಜಿಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸುವ ಕೈಗಾರಿಕೆಗಳಿಗೆ ಅನುಮತಿ ಪಡೆಯುವುದು ಕಷ್ಟ. ಆದರೆ ಅಂತಹ ಕೈಗಾರಿಕೆಗಳ ಸ್ಥಾಪನೆಗೆ ಭಾರತದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಇಂತಹ ಕೈಗಾರಿಕೆಗಳಿಗೆ ಬಂಡವಾಳ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಕೊಪ್ಪಳದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸೀಮಿತವಾಗದೆ, ದೇಶದ ವಿವಿಧ ಭಾಗಗಳಲ್ಲಿ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಕೈಗಾರಿಕೆಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುವ ಕುರಿತು ತಾವು ಹಾಗೂ ತಮ್ಮ ಕೆಲವು ಗೆಳೆಯರು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರ, ವೀರಸಂಗಯ್ಯ, ಕೆ.ಬಿ. ಗೋನಾಳ, ಡಿ.ಎಚ್. ಪೂಜಾರ, ಮಂಜುನಾಥ ಗೊಂಡಬಾಳ, ಸಾವಿತ್ರಿ ಮುಜುಮದಾರ, ಜ್ಯೋತಿ ಗೊಂಡಬಾಳ ಇದ್ದರು.