ಹೂವಿನಹಡಗಲಿಯಲ್ಲಿ ನವ ಜೀವನಕ್ಕೆ ಕಾಲಿಟ್ಟ ನವಜೋಡಿ

| Published : May 10 2024, 11:47 PM IST

ಸಾರಾಂಶ

ಹಬ್ಬ ಜಾತ್ರೆಯ ನೆಪದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡವರ ಪಾಲಿಗೆ ವರವಾಗಿದೆ.

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದಲ್ಲಿ ಬಸವ ಜಯಂತಿ ಹಾಗೂ 43ನೇ ವರ್ಷದ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಯಿತು.

ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದ್ದು, ಬೆಳಿಗ್ಗೆ ತುಂಗಭದ್ರ ನದಿಗೆ ತೆರಳಿ ಗಂಗಾ ಪೂಜೆ ಸಲ್ಲಿಸಿ, ಕುಂಭೋತ್ಸವದ ಮೆರವಣಿಗೆ ಜರುಗಿತು. ಗೋಣಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯರು ಮಾತನಾಡಿ, ಹಬ್ಬ ಜಾತ್ರೆಯ ನೆಪದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡವರ ಪಾಲಿಗೆ ವರವಾಗಿದೆ. ಇಂದು ಎಲ್ಲ ಕಡೆಗೂ ಮದುವೆ ಸಮಾರಂಭಗಳಿಗೆ ದುಂದು ವೆಚ್ಚ ಮಾಡುವವರೇ ಹೆಚ್ಚಾಗಿದ್ದಾರೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಜೀವನವನ್ನು ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಹೊಸ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳು ಮನೆಯಲ್ಲಿನ ಗುರು ಹಿರಿಯರಿಗೆ ಗೌರವ ಕೊಟ್ಟು, ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದರೆ, ಭವಿಷ್ಯದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬಸವ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿರುವ ಗೋಣಿ ಬಸವೇಶ್ವರ ದೇವಸ್ಥಾನದ ಸಮಿತಿಯವರು ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಜನಿಸಿದ ದಿನದಂದು ಮದುವೆಯಾಗುತ್ತಿರುವ ನೀವು ಬಹಳ ಪುಣ್ಯವಂತರು, ಬಸವಣ್ಣನವರ ಆದರ್ಶಮಯ ಬದುಕು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು. ಇಂತಹ ಧಾರ್ಮಿಕ ಕಾರ್ಯಗಳನ್ನು ದೇವಸ್ಥಾನ ಸಮಿತಿಯವರು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಲ್ಲನಕೆರೆ ಮಠದಲ್ಲಿ ಬಸವ ಜಯಂತಿ: ಪಟ್ಟಣದ ಮಲ್ಲನಕೆರೆ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ಹಾಗೂ ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿದ್ದು, ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲೇ ಇಡೀ ವಿಶ್ವಕ್ಕೆ ಸಮಾನತೆ ಸಾರಿದ ಶರಣ ಬಸವಣ್ಣ, ಕಾಯಕ ತತ್ವ, ದಾಸೋಹದ ಮಹತ್ವ ತಿಳಿಸಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಈ ಸಮಾಜವನ್ನು ಸರಿದಾರಿಗೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ಜಯಂತಿಯನ್ನು ಆಚರಿಸಿದರೆ ಸಾಲದು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಬಸ‍ವಣ್ಣ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಅಂದೇ ನೀಡಿದ್ದಾರೆ. ಶರಣರು ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ. ಅವರ ವಚನಗಳನ್ನು ಸಂಗ್ರಹಿಸಿ ಉಳಿಸುವ ಜತೆಗೆ ಅವುಗಳನ್ನು ನಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿದಾಗ, ಅವರಲ್ಲಿ ಧಾರ್ಮಿಕ ಭಾವನೆ ಬರಲಿದೆ. ಸಮಾಜದಲ್ಲಿ ಆ ಮಕ್ಕಳು ಗೌರವಯುತವಾಗಿ ಬದುಕು ಪಾಠ ಕಲಿಯುತ್ತಾರೆಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಅಟವಾಳಿಗಿ ಕೊಟ್ರೇಶ, ಬಿ.ಬಿ.ಅಸುಂಡಿ, ಪುನೀತ್‌ ದೊಡ್ಡಮನಿ, ಸಿದ್ದೇಶ ಸೇರಿದಂತೆ ಇತರರಿದ್ದರು.

ಬಸವ ಜಯಂತಿ ಆಚರಣೆ: ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ವಿಶ್ವ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಸಮಾಜ ಹಾಗೂ ರೆಡ್ಡಿ ಸಮಾಜದ ಭಾಂದವರು ಹಾಗೂ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.