ಮೃತಶರೀರ ಶಸ್ತ್ರಚಿಕಿತ್ಸೆ ನೂತನ ಆವಿಷ್ಕಾರ: ಡಾ.ವೀರಣ್ಣ ಚರಂತಿಮಠ

| Published : Jan 21 2025, 12:30 AM IST

ಮೃತಶರೀರ ಶಸ್ತ್ರಚಿಕಿತ್ಸೆ ನೂತನ ಆವಿಷ್ಕಾರ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಕೆಲವೇ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಥಾಪನೆಯಾದ ಪ್ರಯೋಗಾಲಯ ಉತ್ತರ ಕರ್ನಾಟಕದಲ್ಲಿ ಮೊದಲನೆಯದ್ದು ಎನ್ನುವುದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತ ವೈದ್ಯನಾಗಲು ವಿದ್ಯಾರ್ಥಿಗಳಿಗೆ ಶರೀರ ರಚನೆ ಜ್ಞಾನ ಅವಶ್ಯಕವಾಗಿದೆ. ಈ ಕಾರಣದಿಂದ ಮೃತಶರೀರವನ್ನು ಅಧ್ಯಯನಕ್ಕೆ ಬಳಸಿಕೊಂಡು, ಮೃತಶರೀರದ ಮೂಲಕ ಶಸ್ತ್ರಚಿಕಿತ್ಸೆ ತರಬೇತಿ ಕೂಡ ನೀಡಲಾಗುತ್ತಿದೆ. ಮೃತಶರೀರ ಶಸ್ತ್ರಚಿಕಿತ್ಸೆ ವೈದ್ಯವಿಜ್ಞಾನದ ನೂತನ ಆವಿಷ್ಕಾರವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಅನಾಟಮಿ ವಿಭಾಗದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲಾದ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸುಸಜ್ಜಿತ ಪ್ರಯೋಗಾಲಯ ಇದಾಗಿದೆ. ವಿವಿಧ ಪ್ರಕಾರದ ಶಸ್ತ್ರಚಿಕಿತ್ಸೆ ತರಬೇತಿ ನೀಡಲು ಅಗತ್ಯವಾದ ಎಲ್ಲ ಪ್ರಕಾರದ ಸೌಲಭ್ಯ ಒಳಗೊಂಡಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ಪ್ರಯೋಜನವಾಗಲಿದೆ ಎಂದರು.

ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ಸಂಜೀವ ಕೊಳಗಿ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಹಿರೇಮಠ ಪ್ರಯೋಗಾಲಯದ ವೈಶಿಷ್ಟ್ಯಗಳ ಬಗ್ಗೆ ತಿಳಿಸಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಹೊಂದಲು ವೈದ್ಯಕೀಯ ಕೋರ್ಸ್‌ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೃತದೇಹಗಳ ಮೇಲೆ ಶಸ್ತ್ರಚಿಕಿತ್ಸಾ ತರಬೇತಿ ನೀಡಲು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತದ ಕೆಲವೇ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಈ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಥಾಪನೆಯಾದ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯ ಉತ್ತರ ಕರ್ನಾಟಕದಲ್ಲಿ ಮೊದಲನೆಯದ್ದು ಎನ್ನುವುದು ಹೆಮ್ಮೆಯ ಸಂಗತಿ ಹಾಗೂ ನರಶಸ್ತ್ರ ಚಿಕಿತ್ಸೆ, ಆರ್ಥೋಸ್ಕೊಪಿ, ಲ್ಯಾಪ್ರೋಸ್ಕೊಪಿ, ಎಂಡೋಸ್ಕೊಪಿ ಅಂತಹ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಹೊಂದಲು ಈ ಪ್ರಯೋಗಾಲಯದಲ್ಲಿ ತರಬೇತಿ ನೀಡಲಾಗುವುದು. ವೈದ್ಯಕೀಯ ವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರವಲ್ಲದೆ ವಿವಿಧ ವಿಷಯಗಳ ಶಸ್ತ್ರಚಿಕಿತ್ಸಾ ತಜ್ಞರು ಕೂಡ ಈ ರೀತಿ ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ಈಗಾಗಲೇ ಮೃತಶರೀರ ಶಸ್ತ್ರಚಿಕಿತ್ಸೆ ಸಂಬಂಧಿತ ಹಲವು ಕಾರ್ಯಾಗಾರಗಳನ್ನು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ತರಬೇತಿ ನೀಡಲಾಗಿದೆ. ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದ ವೈದ್ಯರು ಆವಿಷ್ಕರಿಸಿರುವ ವಿಶೇಷ ದ್ರಾವಣದಿಂದ ಮೃತ ದೇಹಗಳನ್ನು ಮತ್ತು ಅವುಗಳ ಅಂಗಾಂಗಗಳನ್ನು ಜೀವಂತ ವ್ಯಕ್ತಿಯಲ್ಲಿರುವಂತೆಯೇ ಸಂರಕ್ಷಿಸಿಡುವ ವಿಶೇಷ ವ್ಯವಸ್ಥೆ ಇದೆ. ಜೊತೆಗೆ ಮೃತ ದೇಹದ ಮೆದುಳಿನಲ್ಲಿ ಕೃತಕ ದ್ರವವನ್ನು (ಸಿಎಸ್‌ಎಫ್) ಸಂಚರಿಸುವಂತೆ ಮಾಡಿ ಮೃತದೇಹದ ಮೆದುಳನ್ನು ಸಂರಕ್ಷಿಸಿಡಲಾಗುತ್ತಿದೆ. ಮೃತದೇಹದ ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಮಾಡುವ ಈ ಪ್ರಕಾರದ ಸಂಶೋಧನೆಯು ಭಾರತದಲ್ಲೇ ಪ್ರಥಮ ಹಾಗೂ ಜಗತ್ತಿನಲ್ಲಿ ಎರಡನೆಯದಾಗಿದೆ. ಮೃತಶರೀರ ಶಸ್ತ್ರಚಿಕಿತ್ಸಾ ಪ್ರಯೋಗಾಲಯದಲ್ಲಿ ಕಿವಿ, ಮೂಗು, ಗಂಟಲು, ಎಲುಬು ಮತ್ತು ಕೀಲು, ನೇತ್ರ, ನರ, ಮೆದುಳು, ಸ್ತ್ರೀರೋಗ ಸಂಬಂಧಿತ ಶಸ್ತ್ರಚಿಕಿತ್ಸೆ ಇತ್ಯಾದಿ ಶಸ್ತ್ರಚಿಕಿತ್ಸೆಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರು, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಅನಾಟಮಿ, ಇ.ಎನ್.ಟಿ ಮತ್ತು ವಿವಿಧ ವಿಭಾಗಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.