ಸಾರಾಂಶ
ಮುಂದಿನ ಮಳೆಗಾಲ ಆರಂಭವಾಗುವುದರ ಒಳಗಾಗಿಯೇ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟುಗಳನ್ನು ಅಳವಡಿಸಬೇಕು.
ಕನ್ನಡಪ್ರಭ ವಾರ್ತೆ ಕಂಪ್ಲಿ
ಮುಂದಿನ ಮಳೆಗಾಲ ಆರಂಭವಾಗುವುದರ ಒಳಗಾಗಿಯೇ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟುಗಳನ್ನು ಅಳವಡಿಸಬೇಕು ಎಂದು ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಿದರು.ತಾಲೂಕಿನ ಅಂಜನಾಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ನವೆಂಬರ್ ವೇಳೆ ಜಲಾಶಯದಲ್ಲಿ 60 ಟಿಎಂಸಿ ನೀರು ಸಂಗ್ರಹವಿದ್ದರೂ, ರೈತರ ಹಿತ ದೃಷ್ಟಿಯಿಂದ ಎರಡನೇ ಬೆಳೆಗೆ ನೀರು ಒದಗಿಸಬೇಕು. ಅಧಿಕಾರಿಗಳು ಜೋಳ ಬೆಳೆ ಸರ್ವೇ ಮಾಡುವಲ್ಲಿ ಎಡವಿದ್ದರಿಂದ ರೈತರ ಜೋಳ ಖರೀದಿಸುವಲ್ಲಿ ತೊಂದರೆಯಾಗಿದೆ. ಇದರಿಂದ ಜೋಳ ಬೆಳೆದ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆಗಳಿವೆ. ರೈತರು ಬೆಳೆದ ಪೂರ್ಣ ಪ್ರಮಾಣದ ಜೋಳ ಖರೀದಿಸಬೇಕು. ಅಲ್ಲದೇ ಜೋಳ ಖರೀದಿಯ ಷರತ್ತುಗಳ ಸಡಿಲಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಕ್ಕೆ ಶಿಕ್ಷಣ ಸಚಿವರೊಂದಿಗೆ ಸಮಾಲೋಚಿಸುತ್ತೇನೆ. ಬಿಇಒ ಕಚೇರಿ ಸ್ಥಾಪಿಸುವಂತೆ ಪುನಃ ಕಲಬುರಗಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಕಾಮಗಾರಿಗೆ ಚಾಲನೆ:
ತಾಲೂಕಿನ ಚಿನ್ನಾಪುರ, ಪ್ರಭುಕ್ಯಾಂಪ್, ಅಂಜನಾಪುರ, ಹೊಸನೆಲ್ಲೂಡಿ ಗ್ರಾಮಗಳಲ್ಲಿ ತಲಾ ₹50 ಲಕ್ಷದ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಗ್ರಾಪಂ ಅಧ್ಯಕ್ಷೆ ನಾಗಮ್ಮ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ, ಗ್ರಾಪಂ ಸದಸ್ಯರಾದ ಎಚ್.ಕುಮಾರಸ್ವಾಮಿ, ತಿಮ್ಮಪ್ಪ, ರಾಮಲಿಸ್ವಾಮಿ, ಉಮೇಶ, ನೇಣ್ಕಿ ಗಿರೀಶ, ಕೊರವರ ಈರಣ್ಣ ಪ್ರಮುಖರಾದ ಪರಶುರಾಮ, ಭಾಸ್ಕರ, ಡಿಶ್ ಪ್ರಸಾದ್, ಶೇಖರ್, ಹೊನ್ನೂರಸ್ವಾಮಿ, ವೀರಭದ್ರಗೌಡ, ರಾಜನಗೌಡ, ಎನ್.ಮಲ್ಲಿಕಾರ್ಜುನ, ಸಿದ್ದಪ್ಪ ಸೇರಿ ಇತರರಿದ್ದರು.