ಕರ್ನಾಟಕ ವಿಧಾನಸಭೆಗೆ ಹೊಸ ರೂಪ, ಹೊಸ ವಿನ್ಯಾಸ

| Published : Jul 16 2024, 12:42 AM IST / Updated: Jul 16 2024, 12:01 PM IST

ಸಾರಾಂಶ

ವಿಧಾನಸಭೆಯ ಪಶ್ವಿಮ ದ್ವಾರದ ಕಡೆ ಇರುವ ಸಭಾಂಗಣದ ಪ್ರವೇಶ ದ್ವಾರವನ್ನು ಹೊಸದಾಗಿ ವಿನ್ಯಾಸಗೊಳಿಸಿರುವುದಲ್ಲದೇ, ಸದನದೊಳಗೆ ಕೆಲ ಭಾಗಗಳನ್ನು ನವೀಕರಣಗೊಳಿಸಿ ಆಕರ್ಷಣೀಯಗೊಳಿಸಲಾಗಿದೆ.

 ವಿಧಾನಸಭೆ : ವಿಧಾನಸಭೆಯ ಪಶ್ವಿಮ ದ್ವಾರದ ಕಡೆ ಇರುವ ಸಭಾಂಗಣದ ಪ್ರವೇಶ ದ್ವಾರವನ್ನು ಹೊಸದಾಗಿ ವಿನ್ಯಾಸಗೊಳಿಸಿರುವುದಲ್ಲದೇ, ಸದನದೊಳಗೆ ಕೆಲ ಭಾಗಗಳನ್ನು ನವೀಕರಣಗೊಳಿಸಿ ಆಕರ್ಷಣೀಯಗೊಳಿಸಲಾಗಿದೆ.

ಸಭಾಂಗಣದ ಪ್ರವೇಶ ದ್ವಾರವನ್ನು ಕುಸುರಿ ಕೆತ್ತನೆಯಲ್ಲಿ ನವೀಕರಣಗೊಳಿಸುವ ಮೂಲಕ ವಿಧಾನಸೌಧಕ್ಕೆ ಹೊಸರೂಪ ನೀಡಲಾಗಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನವೀಕೃತ ಪ್ರವೇಶ ದ್ವಾರವನ್ನು ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಭಾಧ್ಯಕ್ಷ ಯು.ಟಿ.ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಧಾನಸೌಧದ ಪಶ್ವಿಮ ದ್ವಾರದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಅಳವಡಿಸಲಾಗಿದೆ. ಇನ್ನು, ಸದನದೊಳಗೂ ವಿನ್ಯಾಸ ಬದಲಿಸಲಾಗಿದ್ದು, ಒಳಗಿನ ಗೋಡೆಗಳಲ್ಲಿ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳನ್ನು ಅಳವಡಿಸಲಾಗಿದೆ. ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 

ಸಭೆಯ ಎಲ್ಲಾ ಶಾಸಕರ ಕುರ್ಚಿಗಳ ಮುಂದಿರುವ ಮೇಜುಗಳಿಗೆ ಸುವರ್ಣ ಬಣ್ಣದ ಲೋಹದ ಕಟ್ಟುಗಳನ್ನು ಅಳವಡಿಸಿರುವುದು ಆಕರ್ಷಣೀಯವಾಗಿದೆ.ವಿಧಾನಸಭೆಯಲ್ಲಿ ಅಳವಡಿಸಲಾಗಿರುವ ಆಸನಗಳು ಇಷ್ಟು ದಿನ ಯಾವುದೇ ಅಲಂಕಾರ ಇಲ್ಲದೇ ಸಾಧಾರಣ ಸ್ಥಿತಿಯಲ್ಲಿದ್ದವು. ಅವುಗಳಿಗೆ ಸುವರ್ಣ ಬಣ್ಣದ ಅಲಂಕಾರದ ಕಟ್ಟುಗಳು ಎದ್ದು ಕಾಣುತ್ತಿದ್ದು, ಬೆಳಕಿಗೆ ಮಿಂಚುತ್ತವೆ. ಸಭಾಧ್ಯಕ್ಷರ ಪೀಠದ ಇಕ್ಕೆಲಗಳಲ್ಲಿ ಕೇಸರಿ, ಬಿಳಿ, ಹಸಿರಿನ ಹೂವುಗಳಿಂದ ರಾಷ್ಟ್ರಧ್ವಜದ ಮಾದರಿಯ ಅಲಂಕಾರ ಮಾಡಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇನ್ನು, ಸೋಮವಾರ ಸದನದ ಆರಂಭವಾಗುತ್ತಿದ್ದಂತೆ ಸಂಪ್ರದಾಯದಂತೆ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ನಂತರ ಯು.ಟಿ.ಖಾದರ್ ಅವರು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸದನದಲ್ಲಿ ಭೋದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವಿಧಾನಸೌಧ ನವೀಕರಣಗೊಳಿಸಿ ಹೊಸರೂಪ ನೀಡಿರುವುದು, ಸಂವಿಧಾನ ಪ್ರಸ್ತಾವನೆಯನ್ನು ಅಳವಡಿಸಿರುವುದು ಸಂತೋಷ ತಂದಿದೆ. ತಮ್ಮ ಕಾಲದಲ್ಲಿ ಇದು ಆಗಿರುವುದು ಖುಷಿಯ ಸಂಗತಿ ಎಂದರು.