ಸಾರಾಂಶ
ರಾಮನಗರ: ಬಿಬಿಎಂಪಿಯನ್ನು 7 ಪಾಲಿಕೆಗಳನ್ನಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಈಡುಗಾಯಿ ಒಡೆದು ವಿನೂತವಾಗಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಈಡುಗಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ವಿರೋಧಿಸಿ ಏ.26ರಂದು ರಾಜ್ಯದ ಎಲ್ಲೆಡೆ ವಿನೂತನವಾಗಿ ಈಡುಗಾಯಿ ಒಡೆದು ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿಯನ್ನು ವಿಭಜನೆ ಮಾಡುವುದು ಸರಿಯಲ್ಲ. ಬೆಂಗಳೂರು ವಿಭಜನೆಯಾದರೆ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗಲಿದೆ. ಗ್ರೇಟರ್ ಬೆಂಗಳೂರು ಬೇಡವೇ ಬೇಡ ಎಂದು ವಿರೋಧ ವ್ಯಕ್ತಪಡಿಸಿದರು.ಏ.26ರಂದು ರಾಜ್ಯದ ಎಲ್ಲೆಡೆ ಬೀದಿ, ರಸ್ತೆಗಳಲ್ಲಿ ಈಡುಗಾಯಿ ಹೊಡೆದು ಚಳವಳಿ ನಡೆಸುತ್ತೇವೆ. ಅಂದು ಸಾರ್ವಜನಿಕರು ಎಲ್ಲಿ ಬೇಕಾದರೂ ತೆಂಗಿನ ಕಾಯಿ ಹೊಡೆಯಬಹುದು. ಬೆಂಗಳೂರಿನಲ್ಲಿ 1 ಕೋಟಿ ಜನ ಚಳವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯಾವುದೇ ಸರ್ಕಾರಗಳು ಸಮಗ್ರ ಕರ್ನಾಟಕದ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಬೆಂಗಳೂರು ಕರ್ನಾಟಕದ ರಾಜಧಾನಿ ಆಗಿರಬೇಕು. ಗ್ರೇಟರ್ ಬೆಂಗಳೂರು ಬೇಡ. ಅಖಂಡ ಕರ್ನಾಟಕದ ಸಮಗ್ರ ಬೇಡಿಕೆಗಳನ್ನು ಈಡೇರಿಸಲು ಹಾಗೂ ದೇಶದ ಗಮನ ಸೆಳೆಯಲು ಈಡುಗಾಯಿ ಒಡೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಾ.22ರಂದು ಕರ್ನಾಟಕ ಬಂದ್ ಯಶಸ್ವಿಯಾಗಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದರು. ಆದರೆ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಪರಭಾಷಿಗರ ದಾಳಿ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆಯ ರಾಜ್ಯ ಉಪಾದ್ಯಕ್ಷ ಎಂ. ಜಗದೀಶ್ ಐಜೂರು, ಜಿಲ್ಲಾದ್ಯಕ್ಷ ಸಿ.ಎಸ್. ಜಯಕುಮಾರ್, ತಾಲ್ಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ಬೆಂಗಳೂರು ಜಿಲ್ಲಾದ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳಾದ ಕೆ. ಜಯರಾಮು, ಭಾಗ್ಯ, ಸುಧಾ, ಮಂಜುನಾಥ್, ಕೃಷ್ಣಮೂರ್ತಿ, ಕೆಂಪರಾಜು, ಕುಮಾರ್, ಪ್ರಸನ್ನ, ಸಿ.ಕೆ.ನಾಗರಾಜ್, ಪಾರ್ಥಸಾರಥಿ, ವಾಟಾಳ್ ಪಕ್ಷದ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.2ಕೆಆರ್ ಎಂಎನ್ 4.ಜೆಪಿಜಿ
ರಾಮನರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಈಡುಗಾಯಿ ಒಡೆದು ವಿನೂತನವಾಗಿ ಪ್ರತಿಭಟನೆ ನಡೆಸಿದರು.