ಸಾರಾಂಶ
ಜೀವ ವೈವಿಧ್ಯದ ತಾಣವಾಗಿರುವ ಚಾಮರಾಜನಗರದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಸಗಣಿ ಜೀರುಂಡೆ ( DUNG BEETLE) ಗಳನ್ನು ಪತ್ತೆ ಹಚ್ಚಲಾಗಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜೀವ ವೈವಿಧ್ಯದ ತಾಣವಾಗಿರುವ ಚಾಮರಾಜನಗರದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಸಗಣಿ ಜೀರುಂಡೆ ( DUNG BEETLE) ಗಳನ್ನು ಪತ್ತೆ ಹಚ್ಚಲಾಗಿದೆ.ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ಎನ್ವಿರಾನ್‌ಮೆಂಟ್ (ATREE) ಕೀಟಶಾಸ್ತ್ರಜ್ಞರು 3 ಹೊಸ ಪ್ರಭೇದದ ಜೀರುಂಡೆಗಳನ್ನು ಪತ್ತೆ ಹಚ್ಚುವ ಮೂಲಕ ಜಾಗತಿಕವಾಗಿ 176 ಜಾತಿಯ ಜೀರುಂಡೆಗಳಿಗೆ ಈಗ ಮೂರು ಜಾತಿಯ ಜೀರುಂಡೆಗಳು ಸೇರ್ಪಡೆಗೊಂಡಿದೆ.
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒನಿಟಿಸ್ ಕೆಥಾಯ್ ಎಂಬ ಜಾತಿಯ ಜೀರುಂಡೆ, ಅಸ್ಸಾಂನ ತೇಜ್‌ಪುರದಲ್ಲಿ ಒನಿಟಿಸ್ ಬೊಮೊರೆನ್ಸಿಸ್ ಎಂಬ ಮತ್ತೊಂದು ಹಾಗೂ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನಲ್ಲಿ ಮತ್ತೊಂದು ಜಾತಿಯ ಜೀರುಂಡೆ ಪತ್ತೆ ಹಚ್ಚಿ ಒನಿಟಿಸ್ ವಿಸ್ತಾರ ಎಂಬ ಹೆಸರಿಡಲಾಗಿದೆ. ಏಟ್ರಿಯಲ್ಲಿ ಕೀಟಶಾಸ್ತ್ರಜ್ಞರಾಗಿ ಸಂಶೋದನೆಯಲ್ಲಿ ತೊಡಗಿರುವ ಪ್ರಿಯದರ್ಶನ್ ಧರ್ಮರಾಜನ್, ಕರಿಂಬುಂಕರ ಈ ಹೊಸ ಜೀರುಂಡೆಗಳನ್ನು ಪತ್ತೆಹಚ್ಚಿದ್ದು ಬೆಂಗಳೂರಿನ ಹೆಸರಘಟ್ಟದಲ್ಲಿ ಪತ್ತೆಯಾದ ಜೀರುಂಡೆಗೆ ವಿಸ್ತಾರ, ಬಿಳಿಗಿರಿರಂಗನಬೆಟ್ಟದಲ್ಲಿ ಪತ್ತೆಯಾದುದಕ್ಕೆ ಕ್ಷೇತ್ರ ಸಹಾಯಕನಾಗಿದ್ದ ಕೇತಗೌಡ ಹೆಸರು ಹಾಗೂ ಅಸ್ಸಾಂನಲ್ಲಿ ಪತ್ತೆಯಾದ ಜೀರುಂಡೆಗೆ ಬ್ರಹ್ಮಪುತ್ರದ ಅಡ್ಡಾಲಾಗಿರುವಕೋಲಿಯಾ ಬೊಮೊರಾ ಎಂದು ಹೆಸರಿಸಲಾಗಿದೆ.ಈ ಕುರಿತು ಕೀಟ ಶಾಸ್ತ್ರಜ್ಞ ಪ್ರಿಯದರ್ಶನ್ ಪ್ರತಿಕ್ರಿಯಿಸಿ, ಪೋಷಕಾಂಶಗಳ ಸೈಕ್ಲಿಂಗ್‌ನಲ್ಲಿ ಸಗಣಿ ಜೀರುಂಡೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಜೀರುಂಡೆಗಳು ಸಗಣಿಯಲ್ಲಿ ಆಹಾರ, ಸಂತಾನವೃದ್ಧಿ ಮತ್ತು ಗೂಡುಗಳನ್ನು ಮಾಡಿಕೊಳ್ಳಲ್ಲಿದ್ದು ಹವಾಮಾನ ಬದಲಾವಣೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುತ್ತದೆ, ದ್ವಿತೀಯ ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತದೆ ಮತ್ತು ಪರಾವಲಂಬಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.