ರಾತ್ರಿ ಬೈಕಲ್ಲಿ ಸಂಚರಿಸುವವರು ಬೆಚ್ಚಗಿನ ಉಡುಪುಗಳನ್ನು ಧರಿಸುತ್ತಿದ್ದರೆ, ಬೆಳಗಿನ ಜಾವ ಕೆಲಸಕ್ಕೆ ತೆರಳುವವರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್, ಶಾಲುಗಳ ಮೊರೆ ಹೋಗುತ್ತಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ತಾಲೂಕಿನಲ್ಲಿ ಈಗ ಚಳಿಯದ್ದೇ ಮಾತು. ಹಗಲಿನಲ್ಲಿ ಸುಡುಬಿಸಿಲಿನ ಧಗೆ ಒಂದೆಡೆಯಾದರೆ, ಸೂರ್ಯ ಮುಳುಗುತ್ತಿದ್ದಂತೆ ಮೈಕೊರೆಯುವ ಚಳಿಯ ಅನುಭವ ಮತ್ತೊಂದೆಡೆ. ಹಗಲಿಡೀ ಬಿಸಿಲಿಗೆ ಬೆವರಿಳಿಸುವ ಜನರು, ರಾತ್ರಿ ಹೊತ್ತಿಗೆ ಚಳಿಯಿಂದ ಬೆಚ್ಚಗಿನ ಹೊದಿಕೆ ಆಶ್ರಯಿಸುವಂತಾಗಿದೆ. ‘ಚಳಿ ಚಳಿ ತಾಳೆನು ಈ ಚಳಿಯಾ’ ಎನ್ನುವಂತಾಗಿರುವ ವಾತಾವರಣ ಜನರ ಗಮನ ಸೆಳೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಹಗಲು ಮತ್ತು ರಾತ್ರಿ ವಾತಾವರಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಬೆಳಗ್ಗೆ ಸೂರ್ಯನ ಕಿರಣಗಳು ಮೈತಾಕುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಹೊರಗೆ ಓಡಾಡುವವರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಆದರೆ ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ತಂಪು ಆವರಿಸಿಕೊಳ್ಳುತ್ತಿದ್ದು, ರಾತ್ರಿ ಹೊತ್ತಿಗೆ ಚಳಿಯ ಅನುಭವ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ಅಂಕೋಲಾದಲ್ಲಿ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.

ವಿಶೇಷವಾಗಿ ಮುಂಜಾನೆ ಮತ್ತು ರಾತ್ರಿ ವೇಳೆ ಬೀಸುವ ತಣ್ಣನೆಯ ಗಾಳಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮನೆಗಳ ಹೊರಗೆ, ಅಂಗಡಿಗಳ ಮುಂಭಾಗ ಹಾಗೂ ರಸ್ತೆ ಬದಿಗಳಲ್ಲಿ ಕುಳಿತು ಕಾಲ ಕಳೆಯುವವರು ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ಮರದ ಕಟ್ಟಿಗೆ, ಒಣಗಿದ ತೆಂಗಿನ ಗರಿ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ಹಾಕಿ ಬೆಂಕಿ ಹೊತ್ತಿಸಿ ಸುತ್ತಲೂ ಕುಳಿತು ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಹಗಲಿನಲ್ಲಿ ಬಿಸಿಲಿನ ಬೇಗೆ, ರಾತ್ರಿ ವೇಳೆ ಚಳಿಯ ಕಾಟ ಎಂಬ ವಾತಾವರಣದಿಂದಾಗಿ ಜನರು ದಿನಚರಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳುವಂತಾಗಿದೆ. ರಾತ್ರಿ ಬೈಕಲ್ಲಿ ಸಂಚರಿಸುವವರು ಬೆಚ್ಚಗಿನ ಉಡುಪುಗಳನ್ನು ಧರಿಸುತ್ತಿದ್ದರೆ, ಬೆಳಗಿನ ಜಾವ ಕೆಲಸಕ್ಕೆ ತೆರಳುವವರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್, ಶಾಲುಗಳ ಮೊರೆ ಹೋಗುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಸೆಕೆಯ ವಾತಾವರಣವಿರುವುದರಿಂದ ಇಂತಹ ಚಳಿಯ ಅನುಭವ ಜನರಿಗೆ ಕೊಂಚ ವಿಭಿನ್ನ ಎನಿಸುತ್ತಿದೆ. ಒಟ್ಟಿನಲ್ಲಿ ಅಂಕೋಲಾದಲ್ಲಿ ಹಗಲು ಬಿಸಿಲಿನ ಬರೆ, ರಾತ್ರಿ ಚಳಿಯ ಕಚಗುಳಿ ಎಂಬಂತೆ ಹವಾಮಾನದ ವೈಚಿತ್ರ‍್ಯ ಜನರ ಅನುಭವಕ್ಕೆ ಬರುತ್ತಿದೆ.