ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಾಮನೂರು ಶಿವಶಂಕರಪ್ಪ ಅವರಿಗೆ ತಾವು ಶಾಸಕರಾಗಲು, ತಮ್ಮ ಮಗ ಶಾಸಕನಾಗಲು, ತಮ್ಮ ಸೊಸೆ ಸಂಸದರಾಗಲು ಅಹಿಂದ ಮತಗಳು ಬೇಕು. ಆದರೆ ಅಹಿಂದ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕಾಂತರಾಜ್ ವರದಿ ಜಾರಿ ಬೇಡವಾಗಿದೆ ಎಂದು ‘ಅಹಿಂದ ’ ಸಂಘಟನೆಯ ಜಿಲ್ಲಾ ಮುಖ್ಯ ಸಂಚಾಲಕ ಜಿ.ಪರಮೇಶ್ವರಪ್ಪ ಕಿಡಿಕಾರಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ 13 ಲಕ್ಷ ಇರುವ ಅಹಿಂದ ಮತಗಳು ಕೈ ತಪ್ಪಿಹೋಗುವ ಆತಂಕದಿಂದ ಶಾಮನೂರು ಶಿವಶಂಕರಪ್ಪ ಅವರು ಜಾತಿಗಣತಿ ವರದಿ ಜಾರಿಗೆ ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಜಾತಿಗಣತಿಯ ಕಾಂತರಾಜ್ ವರದಿ ಜಾರಿಯಿಂದ ಎಲ್ಲಾ ಜಾತಿಯ ಬಡವರಿಗೆ ನ್ಯಾಯ ಸಿಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಸಿಗುತ್ತವೆ. ಆದರೆ ಅಹಿಂದ ಸಮುದಾಯಗಳಿಗೆ ನ್ಯಾಯ ಸಿಗುವುದು ಕೆಲವು ಬಲಾಢ್ಯ ಜಾತಿಗಳಿಗೆ ಇಷ್ಟವಿಲ್ಲ. ಬದಲಾಗಿ ಅನಗತ್ಯ ಆತಂಕವನ್ನು ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.ಜಾತಿಗಣತಿಗೆ ವಿರೋಧಿಸುತ್ತಿರುವ ಶಾಮನೂರು ಶಿವಶಂಕರಪ್ಪ ಕುಟುಂಬ ಅಹಿಂದ ಸಮುದಾಯಗಳ ಬೆಂಬಲದಲ್ಲೆ ರಾಜಕೀಯ ಸ್ಥಾನಮಾನ ಪಡೆದುಕೊಳ್ಳುತ್ತಾ ಬಂದಿದೆ. ಜಾತಿ ಗಣತಿ ವರದಿ ಜಾರಿಯಾದರೆ ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ವರದಿ ಜಾರಿಗೆ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
‘ಅಹಿಂದ’ ಸಂಘಟನೆಯ ರಾಜ್ಯ ಜಂಟಿ ಸಂಚಾಲಕ ಮಹಮ್ಮದ್ ಸನಾವುಲ್ಲಾ ಮಾತನಾಡಿ, ಕಾಂತರಾಜ್ ವರದಿ ಜಾರಿಗೆ ಕೆಲವೇ ವ್ಯಕ್ತಿಗಳು ವಿರೋಧಿಸುತ್ತಿದ್ದಾರೆ. ಕಾಂತರಾಜ ವರದಿ ಜಾರಿಯಿಂದ ಎಲ್ಲಾ ಜಾತಿಯ ಜನರಿಗೂ ಉಪಯೋಗವಾಗಲಿದೆ. 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ವಿದ್ದಾಗಲೆ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿದ್ದು, ಇದೀಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ವರದಿ ಜಾರಿಯಾಗುವ ಭರವಸೆ ಇದೆ. ಯಾವುದೇ ಸರ್ಕಾರವಿದ್ದರೂ ಕಾಂತರಾಜ್ ವರದಿ ಜಾರಿಯಾಗಲೇಬೇಕು. ವರದಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಾಂತರಾಜ್ ವರದಿ ಮತ್ತು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಮೊಹಮ್ಮದ್ದ ಸನಾವುಲ್ಲಾ ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಶಂಕರರಾವ್ ಮಾತನಾಡಿ, ಅಹಿಂದ ಸಮುದಾಯಗಳು ಎಚ್ಚೆತ್ತುಕೊಂಡಿವೆ. ಕಾಂತರಾಜ್ ವರದಿ ಜಾರಿಗೆ ರಾಜ್ಯಾದ್ಯಾಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಹಿಂದ ಸಂಘಟನೆ ಪದಾಧಿಕಾರಿಗಳಾದ ಅತ್ತಿಗುಂದ ಚಂದ್ರಶೇಖರಪ್ಪ, ಜೆ.ಭಾಸ್ಕರ್, ಹಸನ್ ಆಲಿಖಾನ್ ಆಫ್ರೀದಿ, ಚನ್ನವೀರಪ್ಪ ಗಾಮನಗಟ್ಟಿ, ನೇತಾಜಿ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.
ವರದಿಯಲ್ಲಿ ಎಲ್ಲಾ ಸಮುದಾಯಕ್ಕೆ ನ್ಯಾಯ: ಧರ್ಮರಾಜ್2015ರಲ್ಲಿ ನಡೆಸಲಾದ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾಂತರಾಜ್ ಆಯೋಗದ ವರದಿ ವೈಜ್ಞಾನಿಕವಾಗಿದ್ದು, ಅದರ ಅನುಷ್ಠಾನದಿಂದ ರಾಜ್ಯದ ಎಲ್ಲಾ ಜನಜಾತಿಗಳಿಗೆ ನ್ಯಾಯ ಮತ್ತು ಹಕ್ಕು ಸಿಗಲಿದೆ ಎಂದು ಕಾಂತರಾಜ್ ಆಯೋಗದ ಮಾಜಿ ಸದಸ್ಯ ಎನ್.ಪಿ.ಧರ್ಮರಾಜ್ ಸ್ಪಷ್ಟಪಡಿಸಿದರು.
ಕಾಂತರಾಜ್ ಆಯೋಗವು ನಾನು ಸೇರಿದಂತೆ ಐದು ಜನರ ಆಯೋಗ. ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಶೈಕ್ಷಣಿಕ ಇಲಾಖೆ ಸಿಬ್ಬಂದಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ತಜ್ಞರು ಅಂಕಿ ಅಂಶಗಳನ್ನು ಕ್ರೂಢೀಕರಣ ಮಾಡಿದ್ದಾರೆ. ಕಾಂತರಾಜ್ ವರದಿಯೂ ಅತ್ಯಂತ ವೈಜ್ಞಾನಿಕವಾಗಿದ್ದು, ಶೇ.100ಕ್ಕೆ 100 ವರದಿ ಸೋರಿಕೆಯಾಗಿಲ್ಲ. ವರದಿ ಅವೈಜ್ಞಾನಿಕ ಎಂಬುದರಲ್ಲಿ ಅರ್ಥವೇ ಇಲ್ಲ. ಕೆಲವರು ವರದಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕಾಂತರಾಜ್ ವರದಿ ಜಾರಿಯಿಂದ ಎಲ್ಲಾಜಾತಿಗಳಿಗೂ ನ್ಯಾಯ ಮತ್ತು ಒಳ್ಳೆಯದಾಗುತ್ತದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.18 ರಂದು ಕಾಂತರಾಜ್ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ. ಅವರಿಗೆ ಅಹಿಂದ ಸಮುದಾಯಗಳ ಬಗ್ಗೆ ಬದ್ಧತೆ ಇದೆ. ವರದಿ ಜಾರಿಯಾಗುವ ಭರವಸೆ ಇದೆ ಎಂದ ಅವರು, ಅಹಿಂದ ಸಮುದಾಯಗಳಲ್ಲಿ ಜಾತಿಗಣತಿ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.