ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶವೇ ಇಲ್ಲ!

| Published : Dec 30 2024, 01:03 AM IST

ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶವೇ ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂದು ವಾರದಿಂದ ತಾಲೂಕಿನ ಹಿರೇಬೆಣಕಲ್‌ನ ಸಮೀಪದ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ನಡೆಸಿದ ಪ್ರಕ್ರಿಯೆ ಈಗ ಮುಂದುವರಿದಿದೆ.

ಹಿರೇಬೆಣಕಲ್ ಮೋರೇರ್‌ ಶಿಲಾ ಸಮಾಧಿ ಬಳಿ ಸ್ಥಾವರ ಸ್ಥಾಪನೆಗಾಗಿ ಮುಂದುವರಿದ ಪ್ರಕ್ರಿಯೆ

ಈ ಜಾಗದ ಪರಭಾರೆಗೆ ಯಾರಿಗೂ ಅವಕಾಶ ಇಲ್ಲ

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಕಳೆದ ಒಂದು ವಾರದಿಂದ ತಾಲೂಕಿನ ಹಿರೇಬೆಣಕಲ್‌ನ ಸಮೀಪದ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ನಡೆಸಿದ ಪ್ರಕ್ರಿಯೆ ಈಗ ಮುಂದುವರಿದಿದೆ.

ಈಗಾಗಲೇ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಕಂದಾಯ ಇಲಾಖೆಯವರು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 1200 ಎಕರೆ ಭೂಮಿಯನ್ನು ಗುರುತಿಸಿದ ಬೆನ್ನಲ್ಲೇ ಪರಿಸರವಾದಿಗಳು, ಗ್ರಾಮಸ್ಥರು ಮತ್ತು ರೈತರು ಆಕ್ಷೇಪ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ತಾಲೂಕು ಆಡಳಿತ ಜಾಗ ಗುರುತಿಸಿದ್ದಾರೆ. ಆದರೆ ಈಗ ಅರಣ್ಯ ಇಲಾಖೆಯವರೇ ಅದನ್ನು ಅಪ್ರಸ್ತುತ ಎಂದಿದ್ದಾರೆ.

ಅಖಂಡ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಅಂದರೆ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶವನ್ನು ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಮೀಸಲಿರಿಸಲಾಗಿದೆ. ಈ ಪ್ರದೇಶದಲ್ಲಿ ಒಂದು ಕಟ್ಟಡ ನಿರ್ಮಿಸಲು ಅವಕಾಶ ಇರುವುದಿಲ್ಲ ಎನ್ನುವುದು ಅರಣ್ಯ ಇಲಾಖೆ ವಾದ.

ಪರಭಾರೆಗೆ ಅವಕಾಶ ಇಲ್ಲ:

ಕಾಯ್ದಿಟ್ಟ ಅರಣ್ಯ ಪ್ರದೇಶವು ಕೇವಲ ವನ್ಯಜೀವಿಗಳಿಗೆ ಮೀಸಲಾಗಿದೆ. ವನ್ಯಜೀವಿಗಳ ರಕ್ಷಣೆ, ಪಾಲನೆಗಾಗಿ ಇರುವ ಈ ಜಾಗವನ್ನು ಯಾವ ಇಲಾಖೆಗೂ ಪರಭಾರೆ ಮಾಡುವ ಅವಕಾಶ ಇಲ್ಲ. ಹೀಗಿರುವಾಗ ಕೋಟ್ಯಂತರ ರು. ವೆಚ್ಚದ ಸ್ಥಾವರ ನಿರ್ಮಾಣಕ್ಕೆ ಅವಕಾಶವೇ ಇಲ್ಲ ಎನ್ನುತ್ತಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಅತಿ ಹೆಚ್ಚು ಪ್ರಾಣಿಗಳಿವೆ:

ಹಿರೇಬೆಣಕಲ್, ಚಿಕ್ಕಬೆಣಕಲ್ ಸೇರಿದಂತೆ ಸರ್ವೇ ನಂ. 35 ಮತ್ತು 55ರಲ್ಲಿ ಅರಣ್ಯ ಪ್ರದೇಶ ಇದ್ದು, ಇಲ್ಲಿ ಅತಿ ಹೆಚ್ಚು ಪ್ರಾಣಿಗಳು ಇರುವುದನ್ನು ಅರಣ್ಯ ಇಲಾಖೆ ಸರ್ವೇ ಮಾಡಿದೆ. ಹಿರೇಬೆಣಕಲ್‌ನಿಂದ 10 ಕಿಮೀ ದೂರದಲ್ಲಿ ತೋಳಧಾಮ ಇದ್ದು, 100ಕ್ಕೂ ಹೆಚ್ಚು ಚಿರತೆಗಳು, 50 ಕರಡಿ, 25 ತೋಳ, 500ಕ್ಕೂ ಹೆಚ್ಚು ನವಿಲುಗಳು ಇರುವುದರ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಅರಣ್ಯ ಇಲಾಖೆಗೆ ಮಾಹಿತಿಯೇ ಇಲ್ಲ:

ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಂದಾಯ ಇಲಾಖೆಯವರು ಜಾಗ ಗುರುತಿಸಿರುವುದು ಅರಣ್ಯ ಇಲಾಖೆಯವರ ಗಮನಕ್ಕೆ ಇಲ್ಲವಾಗಿದೆ. ಈಗ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಅಪ್ರಸ್ತುತ ಎಂದು ಅರಣ್ಯ ಇಲಾಖೆ ಹೇಳಿದ್ದರಿಂದ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.