ಸಾರಾಂಶ
ಮಾನಸಿಕ ಒತ್ತಡಕ್ಕೆ ಸಿಲುಕಿದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಟ್ಟಣದ ದಯಾನಂದ ಸಾಗರ ಕಾಲೇಜಿನಲ್ಲಿ ನಡೆದಿದೆ.
ಹಾರೋಹಳ್ಳಿ: ಮಾನಸಿಕ ಒತ್ತಡಕ್ಕೆ ಸಿಲುಕಿದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಟ್ಟಣದ ದಯಾನಂದ ಸಾಗರ ಕಾಲೇಜಿನಲ್ಲಿ ನಡೆದಿದೆ.
ಅನಾಮಿಕ ವಿನಿತ್ (19) ಮೃತ ದುರ್ದೈವಿ. ಈಕೆ ಕೇರಳದ ಕಣ್ಣೂರು ಗ್ರಾಮದ ನಿವಾಸಿಯಾಗಿದ್ದು, ಹಾರೋಹಳ್ಳಿಯ ದಯಾನಂದ ಸಾಗರ ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ವಸತಿ ನಿಲಯದಲ್ಲಿದ್ದ ಅನಾಮಿಕ ಊಟಕ್ಕೆ ಬಾರದಿದ್ದನ್ನು ಗಮನಿಸಿದ ಸ್ನೇಹಿತರು ಹಾಸ್ಟೆಲ್ ವಾರ್ಡನ್ ಗೆ ವಿಷಯ ತಿಳಿಸಿದ್ದಾರೆ. ಕೊಠಡಿಯ ಬಳಿ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಇರುವುದು ಬೆಳಕಿಗೆ ಬಂದಿದೆ.ವಿದ್ಯಾರ್ಥಿನಿ ಅನಾಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೊ ಇಲ್ಲವೊ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ. ಕಾಲೇಜು ಪ್ರಾಂಶುಪಾಲರು ಅನಾಮಿಕಗೆ ಬ್ಲಾಕ್ ಲಿಸ್ಟ್‌ಗೆ ಹಾಕುವುದಾಗಿ ಹೆದರಿಸಿದ್ದರು. ಅಲ್ಲದೆ, ಆಡಳಿತ ಮಂಡಳಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅನಾಮಿಕ ತಂದೆ ವಿನೀತ್ ಕುಮಾರ್ ಸಾವತ್ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.