ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಕೆ ಇ ಬಿ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿನಾಯಕ ಗೆಳೆಯರ ಬಳಗದ ಗೌರಿ ಗಣೇಶ ಮಹೋತ್ಸವದ " ಆಲೂರು ಹಬ್ಬ "ದ ಅಂಗವಾಗಿ ಜೋಡಿ ಎತ್ತುಗಳ ಪ್ರದರ್ಶನ ಹಾಗೂ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಕ್ಕಳಿಂದ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.ವೇಷಭೂಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜ್ಞಾನವಿ, ದ್ವಿತೀಯ ಬಹುಮಾನ ಪರೀಕ್ಷಿತ್, ತೃತೀಯ ಬಹುಮಾನ ಪೂರ್ವಿತ್ ಹಾಗೂ ತನ್ವಿ ಶಮಿತ್ ಗೌಡ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದರಲ್ಲಿ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸೆಸ್ಕಾಂ ಇಲಾಖೆಯ ನೂರಕ್ಕೂ ಹೆಚ್ಚು ನೌಕರರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ನೆರವೇರಿಸಿದ್ದು ವಿಶೇಷವಾಗಿತ್ತು.
ತಾಲೂಕಿನಲ್ಲಿ ಪ್ರಪ್ರಥಮವಾಗಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ " ಎತ್ತುಗಳ ಪ್ರದರ್ಶನ " ಸಾರ್ವಜನಿಕರ ಗಮನ ಸೆಳೆಯಿತು. ಮೊದಲ ಬಾರಿಗೆ ವಿಶೇಷವಾಗಿ ಜೋಡೆತ್ತುಗಳ ಪ್ರದರ್ಶನ ಆಯೋಜನೆ ರೈತರ ಉತ್ಸಾಹವನ್ನು ಹೆಚ್ಚಿಸಿತ್ತು. ರೈತರು ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಎತ್ತುಗಳ ಕೋಡುಗಳಿಗೆ ಕೋಡಂಣ್ಸು, ಗೊಂಡೆ, ಕೊರಳಿಗೆ ಗುಗ್ಗರಿ, ಹಣೆಗೆಜ್ಜೆ, ಮೈಮೇಲೆ ಜೂಲು, ನೋಡುಗರ ಕಣ್ಣು ಎತ್ತುಗಳ ಮೇಲೆ ಬೀಳದಿರಲಿ ಎಂದು ರೈತರು ಕರಿಹಗ್ಗ ಕಟ್ಟಿದ್ದರು.ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ (ಕುರುಬೂರು ಶಾಂತಕುಮಾರ್ ಬಣ) ಅಧ್ಯಕ್ಷ ಎಚ್ ಬಿ ಧರ್ಮರಾಜ್ ಮಾತನಾಡಿ, ಎತ್ತುಗಳ ಸಾಕಾಣಿಕೆ ನಮ್ಮ ಕುಟುಂಬಗಳ ಸಂಪ್ರದಾಯ. ನಾಲ್ಕು ತಲೆಮಾರುಗಳಿಂದ ಪ್ರತಿಯೊಬ್ಬರು ಎತ್ತುಗಳನ್ನು ಸಾಕುತ್ತಿದ್ದರು, ಮನೆಯಲ್ಲಿ ಎತ್ತುಗಳ ಸಾಕಣೆ ಎಂದರೆ ಅದು ಕೇವಲ ಹವ್ಯಾಸವಲ್ಲ, ಅದು ನಮ್ಮ ಬದುಕಿನ ಭಾಗ. ಪ್ರಸ್ತುತ ಕೃಷಿ ಯಾಂತ್ರೀಕರಣ ಆಗುತ್ತಿರುವುದರಿಂದ ಎತ್ತುಗಳ ಸಾಕಾಣಿಕೆಯಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ. ಎತ್ತುಗಳನ್ನು ಅತ್ಯಂತ ಕಾಳಜಿಯಿಂದ ಯಾವುದೇ ಕೊರತೆಯಿಲ್ಲದೆ ಮನೆಯ ಮಕ್ಕಳಂತೆ ಸಾಕಬೇಕು. ನಾಟಿ ತಳಿಯ ಎತ್ತುಗಳು ನಶಿಸಬಾರದು ಅವುಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.
ಎತ್ತುಗಳ ಪ್ರದರ್ಶನದಲ್ಲಿ ಒಟ್ಟು 15ಕ್ಕೂ ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿದ್ದವು. ಎತ್ತುಗಳ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಕಾಟೀಹಳ್ಳಿ ಚಂದ್ರೇಗೌಡ ಹಾಗೂ ಎಂ ಹೊಸಳ್ಳಿ ವೇಣುಗೋಪಾಲ್ ರವರ ಜೋಡಿ ಎತ್ತುಗಳು ತಲಾ 4 ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ, ಕಿರಹಳ್ಳಿ ಮರಿಗೌಡ ಹಾಗೂ ಹುಣಸವಳ್ಳಿ ಮಂಜಯ್ಯ ರವರ ಜೋಡಿ ಎತ್ತುಗಳು ತಲಾ 3 ಸಾವಿರ ನಗದು ಹಾಗೂ ತಲಾ 2 ಸಾವಿರ ನಗದು ತೃತೀಯ ಬಹುಮಾನವನ್ನು ಹುಣಸವಳ್ಳಿ ಮಂಜು ಹಾಗೂ ಕುಮಾರ ಪಡೆದುಕೊಂಡರು.ಇದೇ ಸಂದರ್ಭದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 5 ಸಾವಿರ ನಗದು ಬಹುಮಾನ ದೊಂದಿಗೆ ಪ್ರಥಮ ಸ್ಥಾನವನ್ನು ಭವಾನಿ ಮಧು, 3 ಸಾವಿರ ನಗದು ಬಹುಮಾನವನ್ನು ಮಮತಾ ಕಾಂತರಾಜು, ಕಾಂಚನ 2 ಸಾವಿರ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೈತ ಮುಖಂಡ ಧರ್ಮರಾಜ್, ರಾಧಮ್ಮ ಜನಸ್ಪಂದನ ಸಂಸ್ಥಾಪಕ ಹೇಮಂತ್ ಕುಮಾರ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ವಕೀಲ ನಾಗರಾಜ್, ಅಂತರ ರಾಷ್ಟ್ರೀಯ ಚಿತ್ರಕಲಾವಿದ ಬಿಎಸ್ ದೇಸಾಯಿ, ಶ್ರೀ ವಿನಾಯಕ ಗೆಳೆಯರ ಬಳಗದ ಸಂಘಟಕರು ಸೇರಿದಂತೆ ಇತರರು ಶುಭ ಹಾರೈಸಿದರು.