ಸಾರಾಂಶ
ವೀರರಾಣಿ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಆಯೋಜಿಸಿದ್ದ ಬೈಲಹೊಂಗಲ ಉತ್ಸವದ ಜಾನಪದ ಕಲಾಮೇಳ, ರೂಪಕಗಳ ಮೆರವಣಿಗೆ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಆಯೋಜಿಸಿದ್ದ ಬೈಲಹೊಂಗಲ ಉತ್ಸವದ ಜಾನಪದ ಕಲಾಮೇಳ, ರೂಪಕಗಳ ಮೆರವಣಿಗೆ ಗಮನ ಸೆಳೆಯಿತು.ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಾಜಿ ಆಶ್ವಾರೂಢ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಲಾಯಿತು. ಕಿತ್ತೂರು ಚನ್ನಮ್ಮನ ವೃತ್ತದಿಂದ ಆರಂಭವಾದ ಕಲಾಮೇಳ ಮೆರವಣಿಗೆ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗವಾಗಿ ಚನ್ನಮ್ಮನ ಸಮಾಧಿ ಸ್ಥಳಕ್ಕೆ ಬಂದು ತಲುಪಿತು.
ಮಹಿಳೆಯರ ಬೈಕ್ ರ್‍ಯಾಲಿಗೆ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಕನ್ನಡ ಬಾವುಟ ತೋರಿಸಿ ಚಾಲನೆ ನೀಡಿದರು. ಮಹಿಳಾ ಮುಖ್ಯಸ್ಥೆ ಅನಿತಾ ಹೋಟಿ, ಮೀನಾಕ್ಷಿ ಕುಡಸೋಮಣ್ಣವರ ಮಹಿಳೆಯರು ಬೈಕ್ ರ್‍ಯಾಲಿ ನೇತೃತ್ವ ವಹಿಸಿದ್ದರು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ತಹಸೀಲ್ದಾರ ಎಚ್.ಎನ್. ಶಿರಹಟ್ಟಿ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಮುಖ್ಯಾಧಿಕಾರಿ ವಿರೇಶ ಹಸಬಿ, ಲಿಂಗಾಯತ ಪಂಚಮಸಾಲಿ ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ವಕೀಲ ಎಫ್.ಎಸ್. ಸಿದ್ದನಗೌಡರ, ಮಹಾಂತೇಶ ತುರಮರಿ, ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನೂರಾರು ಸಾರ್ವಜನಿಕರು ಇದ್ದರು.