ಸ್ವಾರ್ಥಕ್ಕಾಗಿ ಕಚ್ಚಾಡಿದರೆ ಪಕ್ಷಕ್ಕೆ ಉಳಿಗಾಲ ಇಲ್ಲ

| Published : Mar 09 2025, 01:49 AM IST

ಸಾರಾಂಶ

ಜನಹಿತ ಮರೆತು ವೈಯಕ್ತಿಕ ಸ್ವಾರ್ಥಕ್ಕೆ ಕಚ್ಚಾಡಿದರೆ ನಮಗೂ ಉಳಿಗಾಲ ಇಲ್ಲ. ನಮ್ಮ ಪಕ್ಷಕ್ಕೂ ಉಳಿಗಾಲವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಕುರಿತು ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಹೊರತು ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜನಹಿತ ಮರೆತು ವೈಯಕ್ತಿಕ ಸ್ವಾರ್ಥಕ್ಕೆ ಕಚ್ಚಾಡಿದರೆ ನಮಗೂ ಉಳಿಗಾಲ ಇಲ್ಲ. ನಮ್ಮ ಪಕ್ಷಕ್ಕೂ ಉಳಿಗಾಲವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಕುರಿತು ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಹೊರತು ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕುರಿತು ಬೇರೆಯವರು ಮಾತನಾಡುವುದು ಬೇರೆ. ನಾನು ಮಾತನಾಡಲು ಆಗುವುದಿಲ್ಲ. ಅಮಿತ್‌ ಶಾ ಅವರು ಪೇಜಾವರ ಶ್ರೀಗಳ ಸ್ಮಾರಕ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೂ ಮುನ್ನ ಅಮಿತ್‌ ಶಾ ಸ್ವಾಗತಕ್ಕೆ ನಾನು ಏರ್‌ಪೋರ್ಟ್‌ಗೆ ಹೋಗಿದ್ದೆ. ಮುಂದೆ ಏನಾಯಿತು ಎನ್ನುವುದು ನನಗೆ ಗೊತ್ತಿಲ್ಲ ಎಂದರು.ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಮಿತ್‌ ಶಾ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅದರ ಬಗ್ಗೆ ಏನೂ ಮಾಹಿತಿ ಇಲ್ಲ. ನಾವೆಲ್ಲರೂ ಪಕ್ಷದ ಕಾರ್ಯಕರ್ತರೇ. ಏನೇ ಚರ್ಚೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ಭಿನ್ನಮತಕ್ಕೆ ಬ್ರೇಕ್‌ ಹಾಕದಷ್ಟು ನಮ್ಮ ಹೈಕಮಾಂಡ್‌ ವೀಕ್‌ ಏನೂ ಇಲ್ಲ. ಯಾವುದೇ ‌ರೋಗಿಗೆ ಬಿಪಿ, ಶುಗರ್ ಇದ್ದಾಗ ಶಸ್ತ್ರಚಿಕಿತ್ಸೆ ಮಾಡಬಾರದು. ಅದು‌ ನಿಯಂತ್ರಣಕ್ಕೆ ಬಂದಾಗಲೇ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದರು.ಬೆಳಗಾವಿ ಜನತೆ ಸಕ್ಕರೆಗಿಂತಲೂ‌ ಸಿಹಿಯಾಗಿದ್ದಾರೆ, ರಾಷ್ಟ್ರೀಯ ವಿಚಾರಕ್ಕೂ ಗಟ್ಟಿಯಾಗಿ ನಿಲ್ಲುತ್ತಾರೆ. ನಾವಿನ್ನು ಜನಹಿತ ಆಧಾರಿಸಿದ ಹೋರಾಟಕ್ಕೆ ಒತ್ತು ಕೊಡಬೇಕು. ಆಗ ಮಾತ್ರ ಪಾರ್ಟಿ ಇನ್ನಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ಉಳಿಯುತ್ತದೆ ಎಂದು ತಿಳಿಸಿದರು.ಪರಿಷತ್‌ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ಕೇಳಿದ ಪ್ರಶ್ನೆಗೆ, ಅದೊಂದು ಕೆಟ್ಟ ಗಳಿಗೆ. ಆ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರ ಕೋರ್ಟ್‌ನಲ್ಲಿದೆ ಎಂದರು.

ರಾಜ್ಯ ಬಜೆಟ್‌ ಮುಸ್ಲಿಂ ಲೀಗ್‌ ಬಜೆಟ್‌: ಸಿ.ಟಿ.ರವಿ

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್‌ ಮುಸ್ಲಿಂ ಲೀಗ್‌ ಬಜೆಟ್‌ ಆಗಿದೆ. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅ‍ವರಿಗೆ ಪ್ರಚೋದನೆ ಕೊಟ್ಟಿರಬಹುದು. ಇದೊಂದು ಕಮ್ಯುನಲ್ ಬಜೆಟ್ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದರು.ಸಿಎಂ ಸಿದ್ದರಾಮಯ್ಯ ಅವರು 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈವರೆಗಿನ ಸಿಎಂ ಮಾಡಿದ ಸಾಲಕ್ಕಿಂತಲೂ ಹೆಚ್ಚಿನ ಸಾಲ ಮಾಡಿದ್ದಾರೆ. ₹4 ಲಕ್ಷ ಕೋಟಿಯಷ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಸಾಲ ₹1.27 ಲಕ್ಷ ಕೋಟಿ. ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ಕೊಟ್ಟಿದ್ದರೆ ತೆರಿಗೆ ಸಂಗ್ರಹ ಆಗುತ್ತಿತ್ತು.. ಕಳೆದ ವರ್ಷ ₹3.22 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಇದುವರೆಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶೇ.55 ರಷ್ಟು ಖರ್ಚು ಮಾಡಿದ್ದಾರೆ. ಶೇ.45ರಷ್ಟು ಅನುದಾನ ಖರ್ಚು ಮಾಡಿಲ್ಲ ಎಂದು ದೂರಿದರು.ಸರ್ಕಾರ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ. ನೀರು, ವಿದ್ಯುತ್, ಪ್ರಾಪರ್ಟಿ, ಬಿತ್ತನೆ, ಬೀಯರ್, ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವುದು ಚಾರುವಾಕನ ನೀತಿ ಆಗಿತ್ತು. ನೀವು ಸಾಲ ಮಾಡಿದ್ದೀರಿ. ತುಪ್ಪ ಯಾರು ತಿನ್ನುತ್ತಿದ್ದಾರೆ? ಜನರ ಮೇಲೆ ಸಾಲ ಹೊರಿಸಿದೀರಿ. ನಿಮ್ಮ ಸರ್ಕಾರದಲ್ಲಿ ತುಪ್ಪ ತಿಂತಿರುವವರು ಯಾರು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.ಈ ಬಜೆಟ್‌ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್‌ನ ಕೋಮುವಾದಿ ರಾಜಕಾರಣ ತೋರಿಸುತ್ತದೆ. ಮುಸ್ಲಿಮರ ಸರಳ ಮದುವೆಗೆ ಐವತ್ತು ಸಾವಿರ ರು. ವೋಟ್ ತೆಗೆದುಕೊಳ್ಳುವಾಗ ನಿಮಗೆ ಹಿಂದೂಗಳು ಬೇಕು. ಅಧ್ಯಕ್ಷರು ನಾವು ಹಿಂದೂವಾಗಿ ಹುಟ್ಟಿದ್ದೇವೆ ಅಂತಾರೆ. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದು ಸಾಕಾಗಿಲ್ವಾ? ಬೇರೆ ಜಾತಿಯಲ್ಲಿ ಬಡವರು ಇಲ್ವಾ? ಅವರಿಗೆ ಯಾಕೆ ಶುಲ್ಕ ಕಡಿತವಿಲ್ಲ? ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸ್ ವಾಪಸ್ ತೆಗೆಯುತ್ತೀರಿ. ಮುಸ್ಲಿಮರಿಗೆ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಆಗಿದೆ. ಮುಲ್ಲಾ, ಮುಸ್ಲಿಂ ಗುರುಗಳ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ಯೋಜನೆಗೆ ಒಂದು ರುಪಾಯಿ ಕೊಟ್ಟಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲ. ಹುಚ್ಚನಿಗೆ ಹೆಚ್ಚು ತಿನ್ನಿಸಿದರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗೋಷ್ಟಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮೇಯರ್‌ ಸವಿತಾ ಕಾಂಬಳೆ, ಎಂ.ಬಿ.ಜಿರಲಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.