ಶಾಂತರೀತಿಯಲ್ಲಿ ಸಂಪನ್ನಗೊಂಡ ಗಣೇಶ ವಿಸರ್ಜನೆ

| Published : Sep 19 2024, 01:58 AM IST

ಸಾರಾಂಶ

ಖಾನಾಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರ ಮನೆ-ಮನಗಳಲ್ಲಿ ಕಳೆದ ಹನ್ನೊಂದು ದಿನಗಳಿಂದ ನೆಲೆಸಿದ್ದ ಗಣಪತಿಯ ವಿಗ್ರಹಗಳನ್ನು ಮಂಗಳವಾರ ಅನಂತ ಚತುರ್ದಶಿಯಂದು ಸಡಗರ ಸಂಭ್ರಮಗಳಿಂದ ವಿಸರ್ಜಿಸಲಾಯಿತು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರ ಮನೆ-ಮನಗಳಲ್ಲಿ ಕಳೆದ ಹನ್ನೊಂದು ದಿನಗಳಿಂದ ನೆಲೆಸಿದ್ದ ಗಣಪತಿಯ ವಿಗ್ರಹಗಳನ್ನು ಮಂಗಳವಾರ ಅನಂತ ಚತುರ್ದಶಿಯಂದು ಸಡಗರ ಸಂಭ್ರಮಗಳಿಂದ ವಿಸರ್ಜಿಸಲಾಯಿತು. ಈ ಬಾರಿ ವಿನಾಯಕನ ವಿಗ್ರಹ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ಮಳೆ ಬಹುತೇಕ ಸಾತ್ ನೀಡಿತು. ಹೀಗಾಗಿ ವಿಸರ್ಜನೆ ಕಾರ್ಯಕ್ರಮ ಬಹುತೇಕ ನಿರ್ವಿಘ್ನವಾಗಿ ಸಂಪನ್ನಗೊಂಡಿತು.ತಾಲೂಕಿನ ಅರಣ್ಯ ಪ್ರದೇಶದ ಜಾಂಬೋಟಿ, ಚೋರ್ಲಾ, ಹೆಮ್ಮಡಗಾ, ಶಿರೋಲಿ, ನೇರಸಾ, ಕಣಕುಂಬಿ, ಚಿಕಲೆ, ಅಮಟೆ, ಕಾಲಮನಿ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಸುರಿದ ಜಿಟಿಜಿಟಿ ಮಳೆಯಲ್ಲೇ ತಮ್ಮೂರ ಅಕ್ಕಪಕ್ಕದ ನದಿ-ಹಳ್ಳಗಳತ್ತ ಗಣೇಶನನ್ನು ಹೊತ್ತು ತೆರಳಿ ಗಣೇಶನ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರು. ತಾಲೂಕಿನ ಉಳಿದೆಡೆ ಮಳೆ ಗಣೇಶ ವಿಸರ್ಜನೆಗೆ ಅನುವು ಮಾಡಿಕೊಟ್ಟಿದ್ದರಿಂದ ಗಣಪತಿಯ ಭಕ್ತರು ಗಣಪತಿ ಬಪ್ಪಾ ಮೋರಯಾ, ಫುಡಚಾ ವರ್ಷಿ ಲವಕರ್ ಯಾ ಎಂಬ ಘೋಷದೊಂದಿಗೆ ವಿಘ್ನ ವಿನಾಯಕನನ್ನು ಗಂಗೆಯಲ್ಲಿ ವಿಸರ್ಜಿಸಿದರು. ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ಭಕ್ತರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಗ್ರಹಗಳನ್ನು ತಮ್ಮ ತಲೆ ಮೇಲೆ ಹೊತ್ತು ಮೆರವಣಿಗೆಯ ಮೂಲಕ ತಮ್ಮೂರಿನ ಹೊರವಲಯದ ಜಲಮೂಲಗಳ ಬಳಿ ತೆರಳಿ ತೀರದಲ್ಲಿ ಗಣೇಶನ ವಿಗ್ರಹಗಳಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿ ನಂತರ ನೀರಿನಲ್ಲಿ ವಿಸರ್ಜಿಸಿದರು. ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯವೂ ಮಂಗಳವಾರ ರಾತ್ರಿ ಪ್ರಾರಂಭಗೊಂಡಿತು. ವಿಸರ್ಜನೆಗೂ ಮುನ್ನ ಗಣೇಶ ವಿಗ್ರಹಗಳ ಮೆರವಣಿಗೆ ಸಂಜೆ ಪ್ರಾರಂಭಗೊಂಡು ರಾತ್ರಿಯರೆಗೂ ನಡೆಯಿತು. ಪಟಾಕಿಗಳ ಅಬ್ಬರ ಮತ್ತು ಬಾಜಾ ಭಜಂತ್ರಿ, ಜಾಂಜ್ ಪಥಕ್‌ಗಳ ಸಡಗರದ ನಡುವೆ ಭಕ್ತರು ಕುಣಿದು ಕುಪ್ಪಳಿಸುವ ಮೂಲಕ ಗಣಪನ ವಿಸರ್ಜನೆ ಕಾರ್ಯಕ್ರಮವನ್ನು ಶಾಂತರೀತಿಯಲ್ಲಿ ಸಂಪನ್ನಗೊಳಿಸಿದರು. ಪಟ್ಟಣದ ಸಾರ್ವಜನಿಕ ಗಣೇಶ ವಿಗ್ರಹಗಳ ಮೆರವಣಿಗೆ ಬುಧವಾರ ಬೆಳಗಿನವರೆಗೆ ನಡೆಯಿತು.ಪಟ್ಟಣ ಹಾಗೂ ಅಸೋಗಾ, ಜಾಂಬೋಟಿ, ಕಣಕುಂಬಿ, ಹಬ್ಬನಹಟ್ಟಿ, ಕುಪ್ಪಟಗಿರಿ, ಪಾರಿಶ್ವಾಡ, ದೇವಲತ್ತಿ, ಹಿರೇಹಟ್ಟಿಹೊಳಿ ಗ್ರಾಮಗಳ ಭಕ್ತರು ಗಣೇಶನನ್ನು ಮಲಪ್ರಭಾ ನದಿಯಲ್ಲಿ ವಿಸರ್ಜಿಸಿದರು. ನಂದಗಡದ ಭಕ್ತರು ಗ್ರಾಮದ ದೊಡ್ಡ ಕೆರೆಯಲ್ಲಿ, ಬೀಡಿಯ ಭಕ್ತರು ಗ್ರಾಮದ ತುಂಬುಗೆರೆಯಲ್ಲಿ ವಿಸರ್ಜಿಸಿದರು. ಪಾರವಾಡ, ಕಣಕುಂಬಿ, ಮಾನ, ಸಡಾ, ಹೊಳಂದ, ಬೇಟಣೆ, ಕಾಪೋಲಿ, ಅಮಗಾಂವ, ಚಿಕಲೆ ಸೇರಿದಂತೆ ತಾಲೂಕಿನ ಕಣಕುಂಬಿ ಅರಣ್ಯದ ಸುತ್ತಮುತ್ತ ವಾಸಿಸುವ ಭಕ್ತರು ಗಣೇಶನನ್ನು ತಮ್ಮೂರಿನ ಸುತ್ತ ಹರಿಯುವ ಕಳಸಾ ಹಳ್ಳ ಮತ್ತು ಮಹದಾಯಿ ನದಿಗಳಲ್ಲಿ ಗಣೇಶನನ್ನು ವಿಸರ್ಜಿಸುವ ಮೂಲಕ ಗಣೇಶೋತ್ಸವಕ್ಕೆ ವಿದ್ಯುಕ್ತ ವಿದಾಯ ನೀಡಿದರು.