ಕಾರ್ಯಕ್ರಮದಲ್ಲಿ ಮೂರು ಸುತ್ತು ಕುಶಾಲತೋಪು ಸಿಡಿಸಿ, ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ, ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ಬಿಸಿಲು, ಮಳೆ, ಚಳಿ ಎನ್ನದೆ ಹಗಲಿರುಳು ಸಮಾಜ ಮತ್ತು ದೇಶವನ್ನು ರಕ್ಷಿಸುವ ಸಮವಸ್ತ್ರಧಾರಿ ಪಡೆಗಳ ತ್ಯಾಗ ಬಲಿದಾನದಿಂದಲೇ ನಾವೆಲ್ಲ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ೨೦೨೫- ೨೬ನೇ ಸಾಲಿನ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಕರ್ತವ್ಯದ ವೇಳೆ ಮಡಿದ ವೀರರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

೧೯೫೯ರ ಅ.೨೧ರಂದು ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಲ್ಲಿ ಗಡಿ ಕಾಯುತ್ತಿದ್ದ ೧೦ ಭಾರತೀಯ ಪೊಲೀಸ್ ಅಧಿಕಾರಿಗಳ ಮೇಲೆ ಅತ್ಯಾಧುನಿಕ ಶಸ್ತ್ರ ಹೊಂದಿದ್ದ ಚೀನಾ ಸೈನಿಕರು ದಾಳಿ ಮಾಡಿದರು. ಸಂಖ್ಯೆಯಲ್ಲಿ ಕಡಿಮೆಯಿದ್ದರೂ ನಮ್ಮ ಯೋಧರು ದಿಟ್ಟತನದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದರು. ಅವರ ಸ್ಮರಣಾರ್ಥ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಸ್ಮರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ದೇಶಾದ್ಯಂತ ಕರ್ತವ್ಯದ ವೇಳೆ ೧೫೪ ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದು, ಅದರಲ್ಲಿ ಕರ್ನಾಟಕದ ೫ ಜನರಿದ್ದಾರೆ ಎಂದು ತಿಳಿಸಿದರು.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಸೇರಿದಂತೆ ಅರೆಸೇನಾ ಪಡೆಗಳ ೧೫೪ ಹುತಾತ್ಮರ ಹೆಸರುಗಳನ್ನು ವಾಚಿಸಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮೂರು ಸುತ್ತು ಕುಶಾಲತೋಪು ಸಿಡಿಸಿ, ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ, ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಪೊಲೀಸ್ ಬ್ಯಾಂಡ್‌ನಿಂದ ಶೋಕಗೀತೆ, ‘ಅಬೈಡ್ ವಿತ್ ಮಿ’ ಹಾಗೂ ‘ಸಾರೇ ಜಹಾನ್ ಸೆ ಅಚ್ಛಾ’ ಗೀತೆ ನುಡಿಸಿ ಗೌರವ ಸಮರ್ಪಿಸಲಾಯಿತು. ಹೆಚ್ಚುವರಿ ಎಸ್‌ಪಿ ಜಗದೀಶ್, ಮನೀಷಾ ಇದ್ದರು.