ಹಣ ವಾಪಸ್‌ಗೆ ವಿದ್ಯಾರ್ಥಿನಿ ಒತ್ತಡ ಹೇರಿದಾಗ ಕ್ಷಮೆ ಕೇಳುವ ನೆಪದಲ್ಲಿ ಕಾಲುಹಿಡಿದು ತಳ್ಳಾಟದಲ್ಲಿ ಕೆಳಗೆ ಬಿದ್ದವಳ ಕೊಲೆಗೈದಿದ್ದ ಅಪ್ರಾಪ್ತನನ್ನು ಬಂಧನ ಮಾಡಲಾಗಿದೆ.

ಬೆಂಗಳೂರು

ಇತ್ತೀಚಿಗೆ ನಡೆದಿದ್ದ ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಂಬಂಧ ಮೃತಳ ಸೋದರನ ಅಪ್ರಾಪ್ತ 14 ವರ್ಷದ ಸ್ನೇಹಿತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಯು ಕೇವಲ ಎರಡು ಸಾವಿರ ರುಪಾಯಿಗೆ ನಡೆದಿದೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಮೇ 15ರಂದು ಸಂಜೆ ಮನೆಯಲ್ಲಿ ಬೃಂದಾವನ ಲೇಔಟ್‌ ನಿವಾಸಿ ಪ್ರಭುದ್ಯಾ (20) ನಿಗೂಢವಾಗಿ ಹತ್ಯೆಯಾಗಿದ್ದಳು. ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಿದ ಪೊಲೀಸರು, ಬಳಿಕ ಮೃತನ ವಿದ್ಯಾರ್ಥಿ ತಾಯಿ ದೂರು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದರು. ಕೊನೆಗೆ ಈ ನಿಗೂಢ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.

ಕನ್ನಡಕ ರಿಪೇರಿಯ ₹2 ಸಾವಿರಕ್ಕೆ ಕೊಲೆ:

ತನ್ನ ತಾಯಿ ಹಾಗೂ ಸೋದರನ ಜತೆ ಮೃತ ವಿದ್ಯಾರ್ಥಿನಿ ಪ್ರಭುದ್ಯಾ ನೆಲೆಸಿದ್ದಳು. ಮನೆಗೆ ಬರುತ್ತಿದ್ದ ತನ್ನ ಸೋದರನ ಸ್ನೇಹಿತರಿಗೆ ಪ್ರಭುದ್ಯಾ ಪರಿಚಯವಾಗಿದ್ದಳು. ಈ ಗೆಳೆತನದಲ್ಲಿ ಸ್ನೇಹಿತರು ಆಗಾಗ್ಗೆ ಮನೆಗೆ ಬರುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರಭುದ್ಯಾ ಸೋದರನ ಗೆಳೆಯರು ಆಟವಾಡುವಾಗ ಒಬ್ಬಾತನ ಕನ್ನಡಕ ಮುರಿದಿತ್ತು. ಆಗ ಆರೋಪಿತ ಬಾಲಕನಿಗೆ ಕನ್ನಡಕ ರಿಪೇರಿ ಮಾಡಿಸಿಕೊಡುವಂತೆ ಮತ್ತೊಬ್ಬ ಸ್ನೇಹಿತ ಹಠ ಹಿಡಿದಿದ್ದ. ಇದಕ್ಕಾಗಿ ವೆಚ್ಚವಾಗುವ ₹2 ಸಾವಿರಕ್ಕೆ ಪ್ರಭುದ್ಯಾಳ ಮನೆಯಲ್ಲಿ ಕಳವು ಮಾಡಲು ಆತ ಮುಂದಾಗಿದ್ದಾನೆ.

ಅಂತೆಯೇ ಗೆಳೆಯನ ಜತೆ ಮನೆ ಬಂದಿದ್ದಾಗ ಆತನ ಸೋದರಿ ಪ್ರಭುದ್ಯಾಳ ಪರ್ಸ್‌ನಲ್ಲಿ ₹2 ಸಾವಿರವನ್ನು ಕಳವು ಮಾಡಿದ್ದ. ಈ ಕಳ್ಳತನ ಸಂಗತಿ ತಿಳಿದ ಪ್ರಭುದ್ಯಾ, ಹಣ ಮರಳಿಸುವಂತೆ ಬಾಲಕನಿಗೆ ತಾಕೀತು ಮಾಡಿದ್ದಳು. ಕೊನೆಗೆ ಮೇ 15ರಂದು ಮಧ್ಯಾಹ್ನ ಮನೆಗೆ ಬಂದು ಪ್ರಭುದ್ಯಾಳ ಬಳಿ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಆತ ಕ್ಷಮೆ ಕೋರಿದ್ದಾನೆ. ಈ ಮಾತಿಗೆ ಆಕ್ಷೇಪಿಸಿದಾಗ ಕಾಲು ಹಿಡಿಯಲು ಆತ ಮುಂದಾಗಿದ್ದಾನೆ. ಈ ಹಂತದಲ್ಲಿ ತಳ್ಳಾಟದಲ್ಲಿ ಪ್ರಭುದ್ಯಾ ಕೆಳಗೆ ಬಿದ್ದು ಪ್ರಜ್ಞಾಹೀನಾಳಾಗಿದ್ದಾಳೆ. ಈ ಅ‍ವಕಾಶವನ್ನು ಬಳಸಿಕೊಂಡ ಆತ, ಪ್ರಭುದ್ಯಾಳ ಕುತ್ತಿಗೆ ಹಾಗೂ ಕೈಯನ್ನು ಚಾಕುವಿನಿಂದ ಕುಯ್ದು ಮನೆಯಿಂದ ಓಡಿ ಹೋಗಿದ್ದಾನೆ.

ಮಹಡಿ ಜಿಗಿದು ಪರಾರಿ

ಪ್ರಭುದ್ಯಾಳ ಹತ್ಯೆ ಬಳಿಕ ಮುಂಬಾಗಿಲಿಗೆ ಒಳಗಿನಿಂದ ಚೀಲ ಹಾಕಿದ ಅಪ್ರಾಪ್ತ, ಬಳಿಕ ಹಿಂಬಾಗಿಲ ಮೂಲಕ ಹೊರಬಂದು ಮಹಡಿಗೆ ತೆರಳಿದ್ದಾನೆ. ಆನಂತರ ಮಹಡಿಯಿಂದ ಪಕ್ಕದ ಮನೆ ಮಹಡಿಗೆ ಜಿಗಿದು ಆತ ತಪ್ಪಿಸಿಕೊಂಡಿದ್ದ. ಇದರಿಂದ ಆರಂಭದಲ್ಲಿ ಪ್ರಭುದ್ಯಾಳ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಸೆರೆಯಾಗಿದ್ದು ಹೇಗೆ?

ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಮೃತನ ಮನೆ ಸುತ್ತಮುತ್ತ ಮನೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೃತ್ಯ ನಡೆದ ದಿನ ಅಪ್ರಾಪ್ತ ಬಾಲಕನ ಮಹಡಿಯಲ್ಲಿ ಶಂಕಾಸ್ಪಾದ ಓಡಾಡುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದ್ದಾರೆ.

ಆತ್ಮಹತ್ಯೆ ಯತ್ನ ತಿಳಿದು ಕೊಲೆ ಸಂಚು ರೂಪಿಸಿದ!

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಈ ಹಿಂದೆ ಮೂರು ಬಾರಿ ಚಾಕುವಿನಿಂದ ಕೈ ಕುಯ್ದುಕೊಂಡು ಪ್ರಭುದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಸಂಗತಿಯನ್ನು ತನ್ನ ಗೆಳೆಯನ ಮುಂದೆ ಆಕೆಯ ಸೋದರ ಹೇಳಿಕೊಂಡಿದ್ದ. ಹೀಗಾಗಿಯೇ ಪ್ರಭುದ್ಯಾಳಿಗೆ ಕೈ ಮತ್ತು ಕುತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಎಂದು ಬಿಂಬಿಸಲು ಆತ ಯತ್ನಿಸಿದ್ದ. ಅಂತೆಯೇ ಸಂಚು ರೂಪಿಸಿ ಆತ ಕಾರ್ಯಗತಗೊಳಿಸಿದ್ದ ಎಂದು ಮೂಲಗಳು ಹೇಳಿವೆ.