ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು

| Published : Aug 03 2025, 11:45 PM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳಿಲ್ಲದ ಕಾರಣ ಕುಡಿಯುವ ನೀರಿಗೆ ಹಾಹಾಕಾರವಿದೆ, ಆದ್ದರಿಂದ ಜನಪ್ರತಿನಿಧಿಗಳು ಶಾಶ್ವತವಾದ ನೀರಾವರಿ ಯೋಜನೆ ಜಾರಿಗೆ ಶ್ರಮಿಸಬೇಕು, ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವರು ಅದು ಎಂದು ಬರುವುದೋ ಗೊತ್ತಿಲ್ಲ. ಕೆಂಪೇಗೌಡರು ಕೆರೆಗಳನ್ನು ನಿರ್ಮಾಣ ಮಾಡಿ ಜೀವ ಜಲ ರಕ್ಷಣೆ ಮಾಡಿದ್ದರು,

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಒಕ್ಕಲಿಗರು ಪ್ರಪಂಚದಾದ್ಯಂತ ಬೆಳೆದಿದ್ದಾರೆ, ಆದರೆ ಒಬ್ಬರು ಬೆಳೆದರೆ ಮತ್ತೊಬ್ಬರು ಸಹಿಸದೆ ಕಾಲೆಳೆಯುವ ಸಂಸ್ಕೃತಿಯನ್ನು ಕೈಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಿ ಮಾದರಿ ಸಮಾಜದವರು ಎಂಬುದನ್ನು ತೋರಿಸಬೇಕೆಂದು ನಿಶ್ಚಲಾನಂದನಾಥ ಸ್ವಾಮಿಜಿ ಸಲಹೆ ನೀಡಿದರು.ಪಟ್ಟಣದ ಕೆಂಪೇಗೌಡ ಭವನದಲ್ಲಿ ಒಕ್ಕಲಿಗರ ಸಂಘದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘಟನಾ ಶಕ್ತಿ ಪ್ರದರ್ಶಿಸಿ

ಕೆಂಪೇಗೌಡರು ೫೦೦ ವರ್ಷಗಳ ಹಿಂದೆ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು, ಕೆಂಗಲ್ ಹನುಂತಯ್ಯ ವಿಧಾನಸೌಧವನ್ನು ಕಟ್ಟಿದರು, ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಕಾಸ ಸೌಧ ನಿರ್ಮಾಣ ಮಾಡಿದರು ಅದೇ ರೀತಿ ಶಾಸಕ ಅಶ್ವಥನಾರಾಯಣ ನಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿ ಕೆಂಪೇಗೌಡರ ಹೆಸರು ಇಡೀ ಪ್ರಪಂಚ ನೆನೆಯುವಂತೆ ಮಾಡಿದ್ದಾರೆ, ಇವರುಗಳ ಆದರ್ಶಗಳನ್ನು ಒಕ್ಕಲಿಗರು ಮೈಗೂಡಿಸಿಕೊಂಡು ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಿ ಬಾಳು ಬಾಳಲು ಬಿಡಬೇಕೆಂದು ಹೇಳಿದರು.ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡದಿದ್ದಿದ್ದರೆ ರಾಜ್ಯದ ಆರ್ಥಿಕ, ರಾಜಕೀಯ, ಸಾಂಸ್ಕೃತಿ,ವೈಜ್ಙಾನಿಕ ಸೇರಿದಂತೆ ಇತರೇ ಶಕ್ತಿಗಳ ನಗರವಾಗುತ್ತಿರಲಿಲ್ಲ, ಇಂತಹ ಮಹಾನ್ ನಾಯಕನ ಜಯಂತಿಯನ್ನು ಪಕ್ಷಾತೀತವಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.ಶಾಶ್ವತ ನೀರಾವರಿ ಅಗತ್ಯ

ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮಿಜಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳಿಲ್ಲದ ಕಾರಣ ಕುಡಿಯುವ ನೀರಿಗೆ ಹಾಹಾಕಾರವಿದೆ, ಆದ್ದರಿಂದ ಜನಪ್ರತಿನಿಧಿಗಳು ಶಾಶ್ವತವಾದ ನೀರಾವರಿ ಯೋಜನೆ ಜಾರಿಗೆ ಶ್ರಮಿಸಬೇಕು, ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವರು ಅದು ಎಂದು ಬರುವುದೋ ಗೊತ್ತಿಲ್ಲ ಎಂದರು.

ಕೆಂಪೇಗೌಡರು ಕೆರೆಗಳನ್ನು ನಿರ್ಮಾಣ ಮಾಡಿ ಜೀವ ಜಲ ರಕ್ಷಣೆ ಮಾಡಿದ್ದರು,ಇಂದು ಅದೇ ಕೆರೆಗಳನ್ನು ಮುಚ್ಚಿ ಬೆಂಗಳೂರು ಬೆಳೆಯುತ್ತಿದೆಂದು ವಿಷಾದಿಸಿದರು. ಜನರು ರಾಜಕಾರಣಿಗಳಿಂದ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಅವರಿಗೆ ನೀರು, ವಿದ್ಯುತ್ ನೀಡಿದರೆ ಸಾಕು ನಿಮ್ಮನ್ನು ಸದಾ ಬೆಂಬಲಿಸುತಾತರೆ. ಮಾಜಿ ಸಂಸದ ಎಸ್.ಮುನಿಸ್ವಾಮಿ ಸಂಸದರಾಗಿದ್ದಾಗ ಕೇಳದಯೇ ಒಕ್ಕಲಿಗರಿಗೆ ಹಲವು ಅನುಕೂಲಗಳನ್ನು ಕಲ್ಪಿಸಿದ್ದಾರೆ. ಇಂತಹವರಿಗೆ ಮತ್ತೆ ಜನರು ಅಧಿಕಾರ ಕೊಡಬೇಕೆಂದು ಆಶಿಸಿದರು.ಇಲ್ಲಿರುವುದು ಭಕ್ತಿ ಪ್ರದರ್ಶನ

ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿ ಬಂಗಾರಪೇಟೆ ಒಕ್ಕಲಿಗರು ಪ್ರತಿ ವರ್ಷ ಕೆಂಪೇಗೌಡರ ಜಯಂತಿಯನ್ನು ಸಾಂಸ್ಕೃತವಾಗಿ,ಭಕ್ತಿ ಪೂರ್ವಕವಾಗಿ ಆಚರಣೆ ಮಾಡುವುದು ರಾಜ್ಯಕ್ಕೆ ಮಾದರಿಯಾಗಿದೆ, ಇಲ್ಲಿನ ಒಕ್ಕಲಿಗರು ಜಯಂತಿಯನ್ನು ಶಕ್ತಿ ಪ್ರದರ್ಶನಕ್ಕೆ ಆಚರಿಸದೆ ಭಕ್ತಿ ಪ್ರದರ್ಶನಕ್ಕೆ ಆಚರಿಸುತ್ತಿದ್ದಾರೆ, ಸಮಾರಂಭಕ್ಕೆ ಯಾವ ನಾಯಕರು ಬರಲಿ ಬಿಡಲಿ ಇಲ್ಲಿ ನೆರೆದಿರುವ ಜನರೇ ನಾಯಕರು. ನಾವು ಯಾರನ್ನೂ ಮೆಚ್ಚಿಸಲಿಕ್ಕೆ ಬಂದಿಲ್ಲ, ಕೆಂಪೇಗೌಡರನ್ನು ಮೆಚ್ಚಿಸಲಿಕ್ಕೆ ಬರಲಾಗಿದೆ ಎಂದರು.ಬಳಿಕ ನಡೆದ ನೂರಾರು ಸ್ತಬ್ಧ ಚಿತ್ರಗಳ ಮೆರವಣಿಗೆ ಆಕರ್ಷಣಿಯವಾಗಿತ್ತು. ವೇದಿಕೆ ಮೇಲೆ ಎಂಎಲ್‌ಸಿ ಗೋವಿಂದರಾಜು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷೆ ಯಳಮ್ಮ, ಕಾರ್ಯದರ್ಶಿ ಎಂ.ಜಿ.ಪ್ರಕಾಶ್, ಪಿ.ಶಿವಕುಮಾರ್, ವಿ.ಮಾರ್ಕಂಡೇಗೌಡ, ಹನುಮಪ್ಪ, ಹುನ್ಕುಂದ ವೆಂಕಟೇಶ್, ಡಾ.ರಮೇಶ್, ಡಾ.ಉಮಾಪ್ರಕಾಶ್ ಇತರರು ಇದ್ದರು.