ಬರವನ್ನು ಕೇವಲ ಪರಿಹಾರ ನೀಡುವ ಸಮಸ್ಯೆಯಾಗಿ ನೋಡದೆ, ಭವಿಷ್ಯದಲ್ಲಿ ಮರುಕಳಿಸದಂತೆ ಶಾಶ್ವತ ಪರಿಹಾರದತ್ತ ಸರ್ಕಾರ ಗಮನ ಹರಿಸಬೇಕು. ಮಳೆಯ ಕೊರತೆ, ಮಣ್ಣಿನ ತೇವಾಂಶ, ಅಂತರ್ಜಲ ಕುಸಿತ, ಬೆಳೆ ಪರಿಸ್ಥಿತಿ ಸೇರಿದಂತೆ ವಾಸ್ತವಿಕ ಅಂಶಗಳನ್ನು ಆಧರಿಸಿ ಬರವನ್ನು ವೈಜ್ಞಾನಿಕವಾಗಿ ಗುರುತಿಸುವ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ವಿಶೇಷವಾಗಿ ರಿಮೋಟ್ ಸೆನ್ಸಿಂಗ್‌ ಆಧಾರಿತ ಮೌಲ್ಯಮಾಪನದಲ್ಲಿ ಉಂಟಾಗುವ ಲೋಪಗಳನ್ನು ಸರಿಪಡಿಸಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಬರವನ್ನು ಕೇವಲ ಪರಿಹಾರ ನೀಡುವ ಸಮಸ್ಯೆಯಾಗಿ ನೋಡದೆ, ಭವಿಷ್ಯದಲ್ಲಿ ಮರುಕಳಿಸದಂತೆ ಶಾಶ್ವತ ಪರಿಹಾರದತ್ತ ಸರ್ಕಾರ ಗಮನ ಹರಿಸಬೇಕು. ಮಳೆಯ ಕೊರತೆ, ಮಣ್ಣಿನ ತೇವಾಂಶ, ಅಂತರ್ಜಲ ಕುಸಿತ, ಬೆಳೆ ಪರಿಸ್ಥಿತಿ ಸೇರಿದಂತೆ ವಾಸ್ತವಿಕ ಅಂಶಗಳನ್ನು ಆಧರಿಸಿ ಬರವನ್ನು ವೈಜ್ಞಾನಿಕವಾಗಿ ಗುರುತಿಸುವ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ವಿಶೇಷವಾಗಿ ರಿಮೋಟ್ ಸೆನ್ಸಿಂಗ್‌ ಆಧಾರಿತ ಮೌಲ್ಯಮಾಪನದಲ್ಲಿ ಉಂಟಾಗುವ ಲೋಪಗಳನ್ನು ಸರಿಪಡಿಸಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಆಗ್ರಹಿಸಿದರು.

ಗುರುವಾರ ವಿಧಾನಸೌಧದಲ್ಲಿ ನಡೆದ ಬರಗಾಲದ ವಿಶೇಷ ಅಧಿವೇಶನದಲ್ಲಿ ಮುದ್ದೇಬಿಹಾಳ ಸೇರಿದಂತೆ ಉತ್ತರ ಕರ್ನಾಟಕದ ರೈತರ ಸಂಕಷ್ಟಗಳನ್ನು ಸದನದ ಗಮನಕ್ಕೆ ತಂದ ಅವರು, ಈ ಭಾಗದ ರೈತರಿಗೆ ಬರ ಹೊಸದೇನಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣದಲ್ಲಿ ಏರುಪೇರು ಉಂಟಾಗುತ್ತಿದ್ದು, ಕೃಷಿ, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇಲೂ ಅದರ ನೇರ ಪರಿಣಾಮ ಬೀರುತ್ತಿದೆ. ಈ ವರ್ಷ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಇದನ್ನು ಸಾಮಾನ್ಯ ಬರಗಾಲವೆಂದು ಪರಿಗಣಿಸದೇ ಗಂಭೀರ ವಿಪತ್ತು ನಿರ್ವಹಣೆಯ ದೃಷ್ಟಿಯಿಂದ ನೋಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ಬರ ನಿರ್ಧಾರ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದು, ಕಡ್ಡಾಯ ಸೂಚಕಗಳು, ಪರಿಣಾಮ ಸೂಚಕಗಳು ಹಾಗೂ ಅಂತಿಮವಾಗಿ ನೆಲಮಟ್ಟದ ಪರಿಶೀಲನೆ ಆಧರಿಸಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಸೆ.22ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಹೆಚ್ಚುವರಿ 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳವೂ ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿದೆ. ಈ ಮೌಲ್ಯಮಾಪನ ಜೂನ್‌ 1ರಿಂದ ಸೆಪ್ಟೆಂಬರ್‌ 16ರವರೆಗಿನ ಪರಿಸ್ಥಿತಿ ಆಧರಿಸಿದೆ.

ರಿಮೋಟ್ ಸೆನ್ಸಿಂಗ್‌ ವ್ಯವಸ್ಥೆಯಲ್ಲಿ ವಾಸ್ತವಾಂಶ ಪ್ರತಿಬಿಂಬಿಸಲಿ:ಬರ ಘೋಷಣೆಯಲ್ಲಿ ಉಪಗ್ರಹ ಆಧಾರಿತ ಮಾಹಿತಿ, ಸಸ್ಯಾವರಣದ ಸ್ಥಿತಿ, ಮಣ್ಣಿನ ತೇವಾಂಶ, ಮಳೆ ಪ್ರಮಾಣ ಸೇರಿದಂತೆ ವಿವಿಧ ವೈಜ್ಞಾನಿಕ ಸೂಚಕಗಳನ್ನು ಬಳಸಲಾಗುತ್ತಿದೆ. ಬೆಳೆ ಆರೋಗ್ಯವನ್ನು ಅಳೆಯಲು ಎನ್‌ಡಿವಿಐ ಸೇರಿದಂತೆ ಉಪಗ್ರಹ ಆಧಾರಿತ ಮಾಹಿತಿಯನ್ನೂ ಪರಿಗಣಿಸಲಾಗುತ್ತದೆ. ಬಳಿಕ ಅರ್ಹ ತಾಲೂಕುಗಳಲ್ಲಿ ನೆಲಮಟ್ಟದ ಪರಿಶೀಲನೆ ನಡೆಸಲಾಗುತ್ತದೆ.

ಆದರೆ ನೀರಾವರಿ ಪ್ರದೇಶಗಳಲ್ಲಿ ಕೇವಲ ಉಪಗ್ರಹ ಆಧಾರಿತ ಅಂಕಿ-ಅಂಶಗಳಿಂದ ರೈತರ ವಾಸ್ತವ ಸಂಕಷ್ಟವನ್ನು ಸಂಪೂರ್ಣವಾಗಿ ಅರ್ಥೈಸಲು ಸಾಧ್ಯವಾಗದ ಸಂದರ್ಭಗಳಿವೆ. ಮಣ್ಣಿನ ತೇವಾಂಶ, ಬೆಳೆ ನಷ್ಟ, ಬಿತ್ತನೆ ವಿಫಲತೆ ಮತ್ತು ಸ್ಥಳೀಯ ನೀರಿನ ಲಭ್ಯತೆಯಂತಹ ಅಂಶಗಳನ್ನು ಸಮಗ್ರವಾಗಿ ಪರಿಗಣಿಸುವ ಅಗತ್ಯವಿದೆ.

ಸಮಗ್ರ ವರದಿ ಹಾಗೂ ನೆಲಮಟ್ಟದ ಪರಿಶೀಲನೆಯ ಆಧಾರದ ಮೇಲೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಆದರೆ ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ತಡವಾಗದಂತೆ ಬರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಮೊದಲೇ ಪರಿಹರಿಸಬೇಕು ಎಂದರು.

ಬರ ನಿರೋಧಕ ಬೆಳೆಗಳತ್ತ ರೈತರನ್ನು ಪ್ರೋತ್ಸಾಹಿಸಿ:ಮುಂದಿನ ದಿನಗಳಲ್ಲಿ ಮಳೆ ಪ್ರಮಾಣದಲ್ಲಿ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಕೃಷಿ ಪದ್ಧತಿಯಲ್ಲಿಯೂ ಬದಲಾವಣೆ ತರಬೇಕಾಗಿದೆ. ಕಡಿಮೆ ನೀರಿನಲ್ಲಿಯೇ ಬೆಳೆಯಬಹುದಾದ ಬೆಳೆಗಳ ಕುರಿತು ರೈತರಿಗೆ ಕೃಷಿ ಇಲಾಖೆ ಮೂಲಕ ಸಮಗ್ರ ಮಾಹಿತಿ ನೀಡಬೇಕು.

ಸೂರ್ಯಕಾಂತಿ, ಸೋಯಾಬೀನ್‌, ಸಿರಿಧಾನ್ಯಗಳು ಸೇರಿದಂತೆ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಕೇವಲ ಬೆಳೆ ಬದಲಾವಣೆ ಹೇಳುವುದಷ್ಟೇ ಅಲ್ಲದೆ, ಉತ್ತಮ ಬೀಜ, ಮಾರುಕಟ್ಟೆ, ಬೆಳೆ ವಿಮೆ, ತಾಂತ್ರಿಕ ಸಲಹೆ ಮತ್ತು ಖರೀದಿ ವ್ಯವಸ್ಥೆಯನ್ನೂ ಸರ್ಕಾರ ಬಲಪಡಿಸಬೇಕು ಎಂದು ಅವರು ಹೇಳಿದರು.

ಆಲಮಟ್ಟಿ–ನಾರಾಯಣಪುರ ನೀರಿನ ಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ:

ಮುದ್ದೇಬಿಹಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕೃಷಿ ಮತ್ತು ಕುಡಿಯುವ ನೀರಿನ ದೃಷ್ಟಿಯಿಂದ ಜಲಾಶಯಗಳ ನೀರಿನ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ. ಆಲಮಟ್ಟಿ ಹಿನ್ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆಯಾಗಿದ್ದರೆ ಅದರ ಪರಿಣಾಮ ನಾರಾಯಣಪುರ ಜಲಾಶಯದ ಮೇಲೂ ಬೀರುವ ಸಾಧ್ಯತೆಯಿದೆ.

ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾದರೆ ಕೃಷಿಯ ಜೊತೆಗೆ ಕುಡಿಯುವ ನೀರಿನ ಮೇಲೂ ಒತ್ತಡ ಉಂಟಾಗಬಹುದು. ಹೀಗಾಗಿ ಕುಡಿಯುವ ನೀರಿನ ಬೇಡಿಕೆ, ಜಲಾಶಯಗಳ ಸಂಗ್ರಹ, ಗ್ರಾಮಗಳ ನೀರಿನ ಮೂಲಗಳು ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಈಗಿನಿಂದಲೇ ಪರಿಶೀಲಿಸಬೇಕು. ಜಿಲ್ಲಾಡಳಿತ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಡಗೌಡ ಆಗ್ರಹಿಸಿದರು.

ರೈತರ ಕಣ್ಣೀರು ಒರೆಸಲು ಕೇಂದ್ರ–ರಾಜ್ಯ ಸಮನ್ವಯ ಅಗತ್ಯ:ಬರ ಪರಿಹಾರವೆಂದರೆ ಕೇವಲ ಪರಿಹಾರಧನ ನೀಡುವುದಕ್ಕೆ ಸೀಮಿತವಾಗಬಾರದು. ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗಾವಕಾಶ, ಬೆಳೆ ವಿಮೆ, ಕೃಷಿ ಸಾಲದ ಒತ್ತಡ ಮತ್ತು ಮುಂದಿನ ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜಗಳಂತಹ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಬೇಕು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ರೈತರಿಗೆ ಸಮರ್ಪಕ ನೆರವು ತಲುಪಲು ಸಾಧ್ಯ. ಈಗಿನ ಬರ ಪರಿಸ್ಥಿತಿಯನ್ನು ಭವಿಷ್ಯದ ನೀರಿನ ನಿರ್ವಹಣೆಗೆ ಪಾಠವನ್ನಾಗಿ ಮಾಡಿಕೊಂಡು, ಮೈಕ್ರೋ ಇರಿಗೇಷನ್‌, ನೀರು ಸಂರಕ್ಷಣೆ, ಕೆರೆ-ಕಟ್ಟೆಗಳ ಪುನಶ್ಚೇತನ ಹಾಗೂ ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ನಾಡಗೌಡ ಹೇಳಿದರು.