ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಾಹನ ದಟ್ಟಣೆ ಹೆಚ್ಚಿರುವ ಸುರತ್ಕಲ್- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ, ಟೋಲ್‌ಗೇಟ್, ಸರ್ವಿಸ್ ರಸ್ತೆ ಇತ್ಯಾದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಕಾರ್ಯ ರ್ಯೋಜನೆಯ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 14 ವರ್ಷಗಳಿಂದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ನೀಗಿಸಿ ಸಂಚಾರ ಸುಲಲಿತಗೊಳಿಸಲು ಶಾಶ್ವತ ಪರಿಹಾರ ಯೋಜನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಬೀದಿ ಬದಿ ವ್ಯಾಪಾರ ಅವ್ಯಾಹತವಾಗಿದ್ದು, ವಾಹನ ಸಂಚಾರ ವ್ಯತ್ಯಯ ಮಾತ್ರವಲ್ಲದೆ, ಅಪಘಾತವೂ ಸಂಭವಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದರು.ಪಡೀಲ್- ಪಂಪ್‌ವೆಲ್ ರಸ್ತೆ:
ಪಡೀಲ್‌ನಿಂದ ಪಂಪ್‌ವೆಲ್‌ವರೆಗಿನ ಉದ್ದೇಶಿತ 2.8 ಕಿಮೀ ರಸ್ತೆಯ ಅಗಲೀಕರಣದಲ್ಲಿ 170 ಮೀ. ಕ್ಯಾರೇಜ್‌ವೇ ಕಾಮಗಾರಿ ಬಾಕಿ ಉಳಿದಿದೆ. ಫುಟ್ ಪಾತ್ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಜಿಎಂ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್. ಸಭೆಗೆ ಮಾಹಿತಿ ನೀಡಿದರು.ಆರು ತಿಂಗಳಲ್ಲಿ ಕಲ್ಲಡ್ಕ ಫ್ಲೈಓವರ್ ಪೂರ್ಣ: ಪೆರಿಯಶಾಂತಿ- ಗುಂಡ್ಯ ರಾ.ಹೆದ್ದಾರಿಯ 66 ಕಿ.ಮೀ. ಉದ್ದದ ಚತುಷ್ಪಥ ಕಾಮಗಾರಿಯ ಕಲ್ಲಡ್ಕ ಫ್ಲೈ ಓವರನ್ನು 2025ರ ಮಾರ್ಚ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೆದ್ ಆಜ್ಮಿ ತಿಳಿಸಿದರು. ಕಲ್ಲಡ್ಕ ಸರ್ವಿಸ್ ರಸ್ತೆಯ ಪ್ರಗತಿಯ ಕುರಿತು ಸಂಸದರು ಕೇಳಿದಾಗ, ಡಿಸೆಂಬರ್‌ನೊಳಗೆ ಪೂರ್ಣಗೊಳಿಸುವುದಾಗಿ ಅಬ್ದುಲ್ಲಾ ಆಜ್ಮಿ ತಿಳಿಸಿದರು.
ನಂತೂರು ಸಮಸ್ಯೆ:ನಂತೂರಿನಲ್ಲಿ ವೆಹಿಕಲ್ ಓವರ್‌ಪಾಸ್‌ಗೆ ಸಂಬಂಧಿಸಿದ ಯೋಜನೆ 3 ವರ್ಷಗಳ ಹಿಂದೆ ಮಂಜೂರಾಗಿದ್ದರೂ ವಿಳಂಬ ಆಗುತ್ತಿರುವುದೇಕೆ? ಅಲ್ಲಿನ ಎಲ್ಲ ಸಮಸ್ಯೆ ಬಗೆಹರಿಸಿ ಯೋಜನೆ ಜಾರಿಗೆ ಕ್ರಮ ವಹಿಸಿ ಎಂದು ಸಂಸದರು ಸೂಚಿಸಿದರು.ನಾರಾಯಣಗುರು ನಾಮಕರಣ:
ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಬಹ್ಮಶ್ರೀ ನಾರಾಯಣಗುರು ವೃತ್ತವೆಂದು ನಾಮಕರಣ ಮಾಡಲು ಸಭೆ ನಡೆಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕಾಲಕಾಲಕ್ಕೆ ರೈಲ್ವೆ ಸಭೆ:
ಸಭೆಯಲ್ಲಿ ರೈಲ್ವೆ ಇಲಾಖೆ ಸಮಸ್ಯೆಗಳಿಗೆ ಉತ್ತರಿಸಲು ಹಿರಿಯ ಅಧಿಕಾರಿಗಳು ಗೈರುಹಾಜರಾಗಿದ್ದಕ್ಕೆ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಡಿಆರ್‌ಎಂ ಅವರನ್ನು ಒಳಗೊಂಡಂತೆ ಮೂರು ತಿಂಗಳಿಗೊಮ್ಮೆ ಹಾಗೂ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ತಿಂಗಳಿಗೊಮ್ಮೆ ನಡೆಸಲು ಇತ್ತೀಚೆಗೆ ರೈಲ್ವೆ ಸಚಿವರು ಸೂಚನೆ ನೀಡಿದ್ದಾರೆ. ಅದರಂತೆ ಪ್ರತಿ ತಿಂಗಳು ಸಭೆಯನ್ನು ನಡೆಸಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿಗೆಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿ.ಪಂ. ಸಿಇಒ ಡಾ. ಆನಂದ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಇದ್ದರು.ಏಕಲವ್ಯ ವಸತಿ ಶಾಲೆಗೆ 15 ಎಕರೆ ಜಾಗ ಗುರುತಿಸಿ
ಏಕಲವ್ಯ ಮಾದರಿ ವಸತಿ ಶಾಲೆಯನ್ನು ಜಿಲ್ಲೆಯಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಬೇಕು. ಬೆಳ್ತಂಗಡಿ, ಕಡಬ ಅಥವಾ ಮೂಲ್ಕಿ ಸೇರಿದಂತೆ ಸಾಧ್ಯವಾದಷ್ಟು ಗ್ರಾಮಾಂತರ ಭಾಗಕ್ಕೆ ಒತ್ತು ನೀಡಿ ಈ ಶಾಲೆ ಆರಂಭಿಲು ಆದ್ಯತೆ ನೀಡಬೇಕು. ಅದಕ್ಕಾಗಿ 15 ಎಕರೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸೂಚಿಸಿದರು.ಕೊರಗರ ಸಮಗ್ರ ಅಭಿವೃದ್ಧಿಗೆ ಯೋಜನೆಪ್ರಧಾನಮಂತ್ರಿ ಅವರ ಮಹಾತ್ವಾಕಾಂಕ್ಷೆಯ ಯೋಜನೆ ಜನಮನ್ ಕಾರ್ಯಕ್ರಮ ರಾಜ್ಯದ ಐದು ಜಿಲ್ಲೆಗಳಿಗೆ ದೊರಕಿದೆ. ದ.ಕ. ಜಿಲ್ಲೆಯಲ್ಲಿ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸಂಸದರು ತಿಳಿಸಿದರು. ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಚುರುಕುಗೊಳಿಸಲು ಸೂಚನೆ
ಗಂಜಿಮಠದಲ್ಲಿ 104 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿರುವುದಕ್ಕೆ ಬ್ರಿಜೇಶ್ ಚೌಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಪಾರ್ಕ್‌ಗೆ ಸಂಬಂಧಿಸಿದ ರಸ್ತೆಗಳು, ಚರಂಡಿ, ವಿದ್ಯುತ್ ಸರಬರಾಜು ಸೇರಿದಂತೆ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಕೋರ್ಟ್ ವ್ಯಾಜ್ಯ ಇರುವ ಜಮೀನನ್ನು ಹೊರತುಪಡಿಸಿ ಉಳಿದ ಜಮೀನಿನಲ್ಲಿ ಮೂಲಸೌಕರ್ಯ ಕಲ್ಪಿಸಲು ಏನು ಅಡ್ಡಿ ಎಂದು ಪ್ರಶ್ನಿಸಿದ ಅವರು, ಇಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲು ಈಗಾಗಲೇ 42 ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಕೂಡಲೆ ಶಾಸಕರು ಮತ್ತು ಸಂಸದರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.