ಹೊಂಡದಲ್ಲಿ ಮುಳುಗಿ ವ್ಯಕ್ತಿ ಸಾವು

| Published : Jul 15 2024, 01:45 AM IST

ಸಾರಾಂಶ

ಹೊಂಡದಲ್ಲಿ ಮುಳುಗಿ ಮೃತರನ್ನು ತೆರ್ನಮಕ್ಕಿಯ ನಿವಾಸಿ ಧರ್ಮೇಂದ್ರ ವಾಮನ ಶೆಟ್ಟಿ(೪೮) ಎಂದು ಗುರುತಿಸಲಾಗಿದೆ.

ಭಟ್ಕಳ: ವ್ಯಕ್ತಿಯೋರ್ವ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕಾಯ್ಕಿಣಿ ಸ್ಮಶಾನದ ಪಕ್ಕದಲ್ಲಿ ಸಂಭವಿಸಿದೆ.

ಮೃತರನ್ನು ತೆರ್ನಮಕ್ಕಿಯ ನಿವಾಸಿ ಧರ್ಮೇಂದ್ರ ವಾಮನ ಶೆಟ್ಟಿ(೪೮) ಎಂದು ಗುರುತಿಸಲಾಗಿದೆ. ಇವರು ಜು. ೧೦ರಂದು ಸಂಜೆ ಮನೆಯಿಂದ ಹೋದವರು ವಾಪಸ್‌ ಮನೆಗೆ ಬಂದಿರಲಿಲ್ಲ. ಮನೆಯವರು ಅವರಿಗಾಗಿ ಹುಡುಕಾಟ ನಡೆಸುತ್ತಿರುವಾಗ ಜು. ೧೩ರಂದು ಅವರ ಶವ ಸ್ಮಶಾನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಶವವೊಂದು ತೇಲುತ್ತಿರುವುದನ್ನು ಕಂಡವರು ದೂರವಾಣಿ ಮಾಡಿ ತಿಳಿಸಿದ್ದು, ಮೃತದೇಹ ಅವರದ್ದೇ ಎಂದು ಗುರುತಿಸಲಾಗಿದೆ.

ಮನೆ ಕಳ್ಳತನಭಟ್ಕಳ: ತಾಲೂಕಿನ ಚಿತ್ರಾಪುರ ರಸ್ತೆಯೊಂದರ ಮನೆಗೆ ಹಗಲು ಹೊತ್ತಿನಲ್ಲಿಯೇ ಮುಖ್ಯ ಬಾಗಿಲಿನ ಕೊಂಡಿಯನ್ನು ಒಳನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಜು. ೧೩ರಂದು ಬೆಳಗ್ಗೆ ೧೧.೩೦ರಿಂದ ಸಂಜೆ ೪.೪೫ರ ವೇಳೆಯ ಒಳಗಾಗಿ ಕಳ್ಳತನ ನಡೆದಿದೆ ಎಂದು ದಿನಕರ ಸಂಜೀವ ಆಚಾರಿ ಎಂಬವರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮನೆಯಲ್ಲಿದ್ದ ೧ ಚಿನ್ನದ ಬಳೆ, ೨ ಉಂಗುರ, ಚಿನ್ನದ ತಿಲಕ ಸೇರಿದಂತೆ ದೇವರ ಪೂಜೆಗೆ ಬಳಸುವ ಸಾಮಗ್ರಿಗಳನ್ನು ಕೂಡಾ ಕಳವು ಮಾಡಿದ್ದು, ಬ್ಯಾಂಕ್ ಲಾಕರ್ ಬೀಗವನ್ನು ತೆಗೆದುಕೊಂಡು ಹೋಗಿದ್ದಾರೆ. ಇವುಗಳ ಅಂದಾಜು ಮೌಲ್ಯ ೬೦ ಸಾವಿರ ಎಂದು ದೂರಿನಲ್ಲಿ ಹೇಳಿದ್ದಾರೆ. ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಜೋಯಿಡಾದ 2 ಅಂಗಡಿಗಳಲ್ಲಿ ಕಳ್ಳತನ

ಜೋಯಿಡಾ: ತಾಲೂಕು ಕೇಂದ್ರದ ಸಿದ್ದೇಶ್ವರ ದೇವಸ್ಥಾನದ(ಶಿವಾಜಿ ವೃತ್ತ) ಪಕ್ಕದಲ್ಲಿರುವ ಎರಡು ಅಂಗಡಿಗಳಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿ ಹಣ ಕದ್ದಿದ್ದಾರೆ.ಅಸ್ಲಮ್ ಮುಂಜಾವರ ಮತ್ತು ಬಂಡ್ಯ ಗಾವುಡ ಅವರ ಅಂಗಡಿಯ ಸೀಟ್ ಒಡೆದು ಒಳಗೆ ನುಗ್ಗಿದ ಕಳ್ಳರು ಅಸ್ಲಾಂ ಅವರ ₹7 ಸಾವಿರ ಮತ್ತು ಬಂಡ್ಯ ಅವರ ₹6 ಸಾವಿರ ಹಣವನ್ನು ಕದ್ದೊಯ್ದಿದ್ದಾರೆ. ಈ ಕುರಿತು ಭಾನುವಾರ ಬೆಳಗ್ಗೆ ಜೋಯಿಡಾ ಪೊಲೀಸರು ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ವರ್ಷ ಕೂಡ ಇದೇ ವೃತ್ತದ ಪಕ್ಕದ ಅಂಗಡಿಯಲ್ಲಿ ಕಳ್ಳರು ಹಣ ಮಾತ್ರ ಒಯ್ದಿದ್ದರು. ಸೀಟ್ ಒಡೆದು ಅಂಗಡಿ ಒಳಗೆ ನುಗ್ಗಿದ ಕಳ್ಳರ ಕೈಚಳಕದಲ್ಲಿ ಸಾಮ್ಯತೆ ಕಂಡುಬರುತ್ತದೆ.