ಸಾರಾಂಶ
ಸಮಾರಂಭದಲ್ಲಿ 120ಕ್ಕೂ ಅಧಿಕ ಕುಟುಂಬಗಳಿಗೆ, ದೇಶಿಯ ಪರಂಪರೆಯಾದ ಗೋಪೂಜೆ, ಕೃಷಿ ಉಪಕರಣಗಳ ಪರಿಚಯ ಮತ್ತು ಪೂಜಾ ವಿಧಾನ, ಹಿರಿಯ ದಂಪತಿಗಳಿಗೆ ಸನ್ಮಾನ, ಪೂರ್ಣ ಕುಂಭ ಕಳಸ ಮೆರವಣಿಗೆ, ಶತಾಯುಷಿಗಳಿಗೆ ಸನ್ಮಾನ ಇನ್ನಿತರ ಅರ್ಥಪೂರ್ಣ ದೇಶಿ ಸೊಗಡು ಅನಾವರಣವಾಯಿತು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಇಡೀ ವಿಶ್ವವೇ ಒಂದು ಕುಟುಂಬ, ಮನೆಯಲ್ಲಿರುವ ಸಹ ಸದಸ್ಯರೊಡನೆ ಸಂಪೂರ್ಣವಾಗಿ ಬೆರೆತಾಗ ಮಾತ್ರ ಆ ವ್ಯಕ್ತಿ ಪರಿಪೂರ್ಣವಾಗುತ್ತಾನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಮೇಲಣಗವಿಮಠದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ಕುಟುಂಬ ಪ್ರಬೋಧನ ನೆಲಮಂಗಲ ಶಾಖೆಯಿಂದ ಏರ್ಪಡಿಸಿದ್ದ ಕುಟುಂಬ ಮಿಲನ ಕಾರ್ಯಕ್ರಮದ ಅಂಗವಾಗಿ, ಹಿಂದೂ ಕುಟುಂಬ ಕುರಿತು ಸಂವಾದ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದೂ ಕುಟುಂಬಗಳಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗಬಾರದು, ಪ್ರತಿಯೊಬ್ಬರೂ ಸಹಜೀವನಕ್ಕೆ ಒತ್ತು ನೀಡಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬದ ಜೊತೆ ಹೇಗೆ ಸಹಬಾಳ್ವೆ ಮಾಡಬೇಕು ಎನ್ನುವುದನ್ನು ಅಖಿಲ ಭಾರತ ಕುಟುಂಬ ಪ್ರಬೋಧನ ತಿಳಿಸುವ ಕಾರ್ಯವನ್ನು ಸದಾ ಮಾಡುತ್ತಿದೆ, ಈ ಕಾರ್ಯಕ್ರಮವೂ ಇದೇ ಮಾದರಿಯಲ್ಲೇ ನಡೆಯುತ್ತಿದೆ, ಈ ಕಾರ್ಯಕ್ರಮದಿಂದ ಕುಟುಂಬದ ಒಳಗಿನ ಸಾಮರಸ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದರು.120 ಕುಟುಂಬಗಳು ಭಾಗಿ: ಸಮಾರಂಭದಲ್ಲಿ 120ಕ್ಕೂ ಅಧಿಕ ಕುಟುಂಬಗಳಿಗೆ, ದೇಶಿಯ ಪರಂಪರೆಯಾದ ಗೋಪೂಜೆ, ಕೃಷಿ ಉಪಕರಣಗಳ ಪರಿಚಯ ಮತ್ತು ಪೂಜಾ ವಿಧಾನ, ಹಿರಿಯ ದಂಪತಿಗಳಿಗೆ ಸನ್ಮಾನ, ಪೂರ್ಣ ಕುಂಭ ಕಳಸ ಮೆರವಣಿಗೆ, ಶತಾಯುಷಿಗಳಿಗೆ ಸನ್ಮಾನ ಇನ್ನಿತರ ಅರ್ಥಪೂರ್ಣ ದೇಶಿ ಸೊಗಡು ಅನಾವರಣವಾಯಿತು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ, ಕಾರ್ಯದರ್ಶಿ ನಾರಾಯಣಸ್ವಾಮಿ, ನೆಲಮಂಗಲ ತಾಲೂಕು ಅಧ್ಯಕ್ಷ ಕೆರೆಕತ್ತಿಗನೂರು ಗಂಗಣ್ಣ, ಕೋಡಿಹಳ್ಳಿ ಸಿ.ಅರುಣ್ ಕುಮಾರ್ ಸೇರಿ ತಾಲೂಕು ಕಿಸಾನ್ ಸಂಘದ ಎಲ್ಲಾ ಪದಾಧಿಕಾರಿಗಳು, ನೂರಾರು ಕುಟುಂಬದ ಸಹ ಸದಸ್ಯರು ಹಾಜರಿದ್ದರು.