ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇವರು ಶಸ್ತ್ರಗಳಿಂದ ದುಷ್ಟರ ಸಂಹರಿಸುತ್ತಾ ಬಂದರೂ ದುಷ್ಟರು ಮತ್ತೆ ಮತ್ತೆ ಹುಟ್ಟುವುದರಿಂದ ಗುರು ಶಸ್ತ್ರಗಳ ಬದಲಿಗೆ ಶಾಸ್ತ್ರಗಳಿಂದ ದುಷ್ಟರಲ್ಲಿನ ದುಷ್ಟ ಗುಣಗಳ ತೊಡದು ಹಾಕಿ ಸಜ್ಜನರಾಗಿ ಮಾಡುವ ಮೂಲಕ ಗುರು ದೇವರಿಗಿಂತ ದೊಡ್ಡವನಾಗುತ್ತಾರೆ ಎಂದು ಜಂಗಮವಾಡಿ ಮಠ ಕಾಶಿಪೀಠ (ವಾರಾಣಸಿ) ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಗೋವಿನಕೋವಿ ಗ್ರಾಮದಲ್ಲಿ ಶ್ರೀಹಾಲಸ್ವಾಮಿ ಸೇವಾ ಸಮಿತಿ ವತಿಯಿಂದ ಹಾಲಸ್ವಾಮಿ ಬೃಹನ್ಮಠದ ನೂತನ ಗುರುಗಳಾಗಿ ಶ್ರೀಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳವರ ಪಟ್ಟಾಧಿಕಾರ ಹಾಗೂ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಒಬ್ಬ ವ್ಯಕ್ತಿಯ ಶಸ್ತ್ರಗಳಿಂದ ಸಾಯಿಸಬಹುದು, ಸತ್ತ ವ್ಯಕ್ತಿ ಮತ್ತೆ ಹುಟ್ಟಿ ಬರಬಹುದು ಜನನ-ಮರಣ ನಿರಂತರವಾಗಿರುತ್ತವೆ. ಆದರೆ ದೇವರು ಗುರುವಿನ ರೂಪದಲ್ಲಿ ಶಾಸ್ತ್ರಗಳಿಂದ ವ್ಯಕ್ತಿಯಲ್ಲಿನ ದುರ್ಗುಣಗಳ ಸಂಹರಿಸಿ ಸಜ್ಜನರಾಗಿ ಮಾಡುತ್ತಾನೆ ಇದರಿಂದ ಗುರು ಸರ್ವಶ್ರೇಷ್ಠನಾಗುತ್ತಾನೆ ಎಂದರು. ದೇವರ ಕೃಪೆಯ ಪ್ರತಿಫಲ ಎಂಬಂತೆ ಗೋವಿನಕೋವಿ ಹಾಲಸ್ವಾಮಿ ಮಠದ ನೂತನ ಗುರುಗಳಾದ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಗುರುಗಳು ಸ್ವಯಂ ಪ್ರೇರಣೆಯಿಂದ ಗೃಹಸ್ಥಾಶ್ರಮಕ್ಕೆ ತೆರಳದೇ ಬ್ರಹ್ಮಚರ್ಯದಲ್ಲಿಯೇ ಮುಂದುವರಿಯುವುದಾಗಿ ತಿಳಿಸಿದ್ದು, ಪಟ್ಟಾಧಿಕಾರದ ನಂತರ ಸ್ವಯಂ ಪ್ರೇರಣೆಯಿಂದ ವಿರಕ್ತಿ ಮನೋಭಾವನೆ ತಾಳಿದ್ದು, ಮುಂದೆ ಇವರ ಸೇವೆ ಇಡೀ ಮುನುಕುಲ, ಸಮಾಜಕ್ಕೆ ಹೆಚ್ಚಿನ ರೀತಿಯಲ್ಲಿ ಲಭಿಸುವಂತಾಗಲಿದೆ ಎಂದರು.ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಗೋವಿನಕೋವಿ ಹಾಲಸ್ವಾಮಿ ಮಠದ ನೂತನ ಸ್ವಾಮೀಜಿ ವಿದ್ಯಾಸಂಪನ್ನರಾಗಿದ್ದು, ಇವರ ನೇತೃತ್ವದಲ್ಲಿ ಗೋವಿನಕೋವಿ ಮಠ ಹೆಚ್ಚಿನ ಅಭಿವೃದ್ಧಿ ಹೊಂದಲಿದ್ದು, ಇದಕ್ಕೆ ಗ್ರಾಮದ ಎಲ್ಲಾ ಭಕ್ತರ ಸಹಕಾರ ಅತ್ಯಗತ್ಯ. ಹೊನ್ನಾಳಿ ಹಿರೇಕಲ್ಮಠ ಕೂಡ ಇವರೊಂದಿಗೆ ಇರುತ್ತದೆ ಎಂದರು.
ಪಟ್ಟಾಧಿಕಾರ ಪಡೆದ ನೂತನ ಸ್ವಾಮೀಜಿ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಧರ್ಮೋಪದೇಶ ನೀಡಿ ಗೋವಿನಕೋವಿಯ ಹಾಲಸ್ವಾಮಿ ಮಠ ರಾಜಕೀಯ ಕ್ಷೇತ್ರದಿಂದ ದೂರವಿದ್ದು, ಕೇವಲ ಭಕ್ತರಿಗಾಗಿ ಈ ಮಠ ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.ಡಾ.ಪ್ರಭಾ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಜಿ.ಸುರೇಂದ್ರಗೌಡ, ಡಿ.ಜಿ.ವಿಶ್ವನಾಥ್, ಡಾ. ಧನಂಜಯ ಸರ್ಜಿ, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಶಾಂತರಾಜ್ ಪಾಟೀಲ್, ಅನೀತ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಂಪುರ ಹಾಲಸ್ವಾಮಿ ಮಠದ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿ, ದಿಡಗೂರು ಅಣ್ಣಪ್ಪಸ್ವಾಮಿ, ಶ್ರೀ ಹಾಲಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಫಾಲಾಕ್ಷಪ್ಪ ಗೌಡ, ಅಧ್ಯಕ್ಷ ರಮೇಶ್, ಕಾರ್ಯದರ್ಶಿ ರುದ್ರೇಶ್, ಮುಖಂಡರಾದ ಎಚ್.ಎ.ಗದ್ದಿಗೇಶ್, ದಿಡಗೂರು ಎ.ಜಿ., ಪ್ರಕಾಶ್, ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ, ಎ.ಬಿ.ಹನುಮಂತಪ್ಪ ಸೇರಿ ಅನೇಕ ಮುಖಂಡರಿದ್ದರು. ಗುರುವಾರ ಬೆಳಗ್ಗೆ ನೂತನ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ, ಸಂಗೀತ ಕಾರ್ಯಕ್ರಮ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.---------------------