ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

| Published : Jun 16 2024, 01:46 AM IST

ಸಾರಾಂಶ

ಶುಕ್ರವಾರ ಪೊಲೀಸ್ ಠಾಣೆ ಎದುರು ಭಾಸ್ಕರ ಪೆಟ್ರೋಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಿನ ರಾಮನಗರ ಪೊಲೀಸ್ ಸ್ಟೇಷನ್ ಎದುರು ಶುಕ್ರವಾರ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಭಾಸ್ಕರ ಬಂದೋಳಕರ್(28) ಶನಿವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾಸ್ಕರ ಸಾವಿನ ಸುದ್ದಿ ತಿಳಿದು ಸಾರ್ವಜನಿಕರು ರಾಮನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶುಕ್ರವಾರ ಪೊಲೀಸ್ ಠಾಣೆ ಎದುರು ಭಾಸ್ಕರ ಪೆಟ್ರೋಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರ ಕಿರಿಕಿಯ ಬಗ್ಗೆ ಆತ ವಿಡಿಯೋ ಮಾಡಿದ್ದ. ರಾಮನಗರ ಪಿಎಸ್ಐ ತನಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಅವರ ವರ್ತನೆಯಿಂದ ಬೇಸತ್ತಿದ್ದೇನೆ ಎಂದು ತಿಳಿಸಿದ್ದ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಭಾಸ್ಕರ ಸಾವಿನ ಸುದ್ದಿ ತಿಳಿದ ಸಾರ್ವಜನಿಕರು ಶನಿವಾರ ರಾಮನಗರ ಶಿವಾಜಿ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಸ್ ಗಾವುಡಾ ಮಾತನಾಡಿ, ರಾಮನಗರದಲ್ಲಿ ನಡೆದ ಘಟನೆಯಿಂದ ತಾಲೂಕಿನ ಜನತೆಗೆ ತುಂಬಾ ಬೇಸರವಾಗಿದೆ. ಜನತೆಗೆ ಸಮಾಜಕ್ಕೆ ಶಾಂತಿಮಂತ್ರ ಹೇಳಬೇಕಾದ ಪೊಲೀಸರೇ ಹೀಗೆ ವರ್ತಿಸಿದರೆ ಜನರ ಪಾಡೇನು? ಇಂಥವರಿಂದ ನಾವು ತಲೆ ತಗ್ಗಿಸಬೇಕಾದ ಸ್ಥಿತಿ ಬಂದಿದೆ. ರಾಮನಗರದಲ್ಲಿ ಮಟ್ಕಾ ನಿಲ್ಲಿಸದೇ ಇಲ್ಲಿ ನಡೆಯುವ ಅವ್ಯವಹಾರ ನಿಲ್ಲಿಸದೇ ಜನಸಾಮಾನ್ಯರ ಮೇಲೆ ಈ ರೀತಿ ದಬ್ಬಾಳಿಕೆ ನಡೆಸಿದವರ ಮೇಲೆ ಕ್ರಮ ಆಗಲೇಬೇಕು. ಭಾಸ್ಕರ್ ಸಾವಿಗೆ ಕಾರಣರಾದವರು ಯಾರು? ಅವರನ್ನು ಕೂಡಲೇ ಅಮಾನತು ಮಾಡಬೇಕು. ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೇರಿದ ಜನರು ಬೇಕೇ ಬೇಕು, ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ಭಾಸ್ಕರ್ ಸಾವಿನ ತನಿಖೆ ಆಗಬೇಕು.

ಪಿಎಸ್ಐ ನೀಡಿದ ತೊಂದರೆಯಿಂದ ಈ ಘಟನೆ ನಡೆದಿದೆ. ಕುಟುಂಬಕ್ಕೆ ನ್ಯಾಯ ಸಿಗಬೇಕು. ಭಾಸ್ಕರ್ ಬೆಳಗಾವಿಗೆ ಹೋಗುವ ದಾರಿಯಲ್ಲಿ ಪಿಎಸ್‌ಐ ದೌರ್ಜನ್ಯದ ಬಗ್ಗೆ ಹೇಳಿದ್ದಾನೆ. ಅದರ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪ್ರತಿಭಟಿಸಿದರು.

ಈ ನಡುವೆ ಬೆಳಗಾವಿಯಲ್ಲಿ ಮೃತದೇಹವನ್ನು ವಾರಸುದಾರರು ಇದುವರೆಗೂ ವಶಕ್ಕೆ ಪಡೆದಿಲ್ಲ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಕುಣುಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಲಿಪ್, ಮಾಜಿ ಅಧ್ಯಕ್ಷ ಅಜಿತ್ ಮಿರಾಶಿ ಸೇರಿದಂತೆ ನೂರಾರು ಜನರು ಇದ್ದರು. ಶೀಘ್ರ ಕ್ರಮ: ಭಾಸ್ಕರ ಆತ್ಮಹತ್ಯೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಅಗತ್ಯ ಕ್ರಮ ಮಾಡುತ್ತೇವೆ. ಮೂರ್ನಾಲ್ಕು ದಿನದಲ್ಲಿ ಇಲಾಖೆಯ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ್ ತಿಳಿಸಿದರು.