ಸಾರಾಂಶ
ಮನೆ ಮನೆಗಳಲ್ಲಿ ವ್ಯಕ್ತಿ ಹುಟ್ಟುವುದು ಸಹಜ ಪ್ರಕ್ರಿಯೆ. ಆದರೆ, ವ್ಯಕ್ತಿತ್ವ ಜನಿಸುವುದು ಬಹಳ ಅಪರೂಪ. ದೇವರ ಆಶೀರ್ವಾದ ಪಡೆದುಕೊಂಡು ಬಂದ ಅಪರೂಪದ ವ್ಯಕ್ತಿತ್ವ ಅಂಬರೀಶ್ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯ ; ಮನೆ ಮನೆಗಳಲ್ಲಿ ವ್ಯಕ್ತಿ ಹುಟ್ಟುವುದು ಸಹಜ ಪ್ರಕ್ರಿಯೆ. ಆದರೆ, ವ್ಯಕ್ತಿತ್ವ ಜನಿಸುವುದು ಬಹಳ ಅಪರೂಪ. ದೇವರ ಆಶೀರ್ವಾದ ಪಡೆದುಕೊಂಡು ಬಂದ ಅಪರೂಪದ ವ್ಯಕ್ತಿತ್ವ ಅಂಬರೀಶ್ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಡಾ.ಎಂ.ಎಚ್.ಅಂಬರೀಶ್ ಫೌಂಡೇಷನ್‌ನಿಂದ ಸಾಧಕರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಅಂಬರೀಶ್ ಜೀವನ ಒಂದು ಸಂದೇಶವಿದ್ದಂತೆ. ಅವರು ಅಗಲಿ ಹೋದ ತಕ್ಷಣ ಅವರ ಆಸೆ-ಕನಸುಗಳು ಅಲ್ಲಿಗೇ ನಿಲ್ಲಬಾರದು. ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಅಂಬರೀಶ್ ಫೌಂಡೇಷನ್‌ಗೆ ಚಾಲನೆ ನೀಡಿರುವುದಾಗಿ ಹೇಳಿದರು.
ಅಂಬರೀಶ್ ಅವರನ್ನು ಬಹಳ ಪ್ರೀತಿ, ಅಭಿಮಾನ, ಅಕ್ಕರೆಯಿಂದ ಕಂಡವರು ಮಂಡ್ಯ ಜಿಲ್ಲೆಯ ಜನರು. ಕರ್ನಾಟಕದಲ್ಲಿ ಎಲ್ಲಾ ಕಡೆ ಅವರನ್ನು ಪ್ರೀತಿಸುವವರಿದ್ದರೂ ಮಂಡ್ಯ ಜನರನ್ನು ಅಂಬರೀಶ್ ಹೆಚ್ಚು ಇಷ್ಟಪಡುತ್ತಿದ್ದರು. ಅಂಬರೀಶ್ ಬಗ್ಗೆ ನನಗೇ ಗೊತ್ತಿಲ್ಲದ ಅನೇಕ ಸಂಗತಿಗಳು ಸಾಕಷ್ಟಿವೆ. ಅದನ್ನು ಜನರು, ಸ್ನೇಹಿತರಿಂದ ತಿಳಿದುಕೊಂಡಿದ್ದೇನೆ ಎಂದರು.
ಸಾಧಕರನ್ನು ಗೌರವಿಸಿರುವುದು ಹೆಮ್ಮೆ ಎನಿಸಿದೆ. ಅದೇ ರೀತಿ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಅಷ್ಟೇ ಖುಷಿ ನೀಡಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಸ್ಫೂರ್ತಿ ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಬಡ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆಯೂ ಗಂಭೀರವಾಗಿ ಆಲೋಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.
ಪ್ರತಿ ವರ್ಷವೂ ಅಂಬರೀಶ್ ಜನ್ಮದಿನವನ್ನು ಮಂಡ್ಯದಲ್ಲೇ ಆಚರಿಸುತ್ತೇವೆ. ಈ ನೆಲದಲ್ಲಿ ಆಚರಿಸಿದರೆ ಅದು ಅರ್ಥಪೂರ್ಣ. ಅದರ ಮೌಲ್ಯವೂ ಹೆಚ್ಚಾಗುತ್ತದೆ ಎಂದರು.
ಅಂಬರೀಶ್ ಕುರಿತು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ, ಒರಟುತನ ಮತ್ತು ಪ್ರೀತಿ ಎಂದೂ ಜೊತೆಯಲ್ಲಿ ಇರುವುದಿಲ್ಲ. ಪ್ರೀತಿಗೆ ಬೇಕಿರುವುದು ಸೂಕ್ಷ್ಮತೆ, ನವಿರುತನ, ಲವಲವಿಕೆ, ಆದರೆ, ಒರಟುತನ, ಪ್ರೀತಿಯನ್ನು ಜೊತೆಯಲ್ಲೇ ಇರಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಅಂಬರೀಶ್‌ರವರದ್ದು. ಬುದ್ಧಿ-ಭಾವಾಲಿಂಗನದೊಂದಿಗೆ ಅವರ ಬದುಕು ಕಾವ್ಯಮಯವಾಗಿತ್ತು ಎಂದು ನುಡಿದರು.
ಅಂಬರೀಶ್ ಅವರ ಪ್ರಕಾರ ಯಾವುದೇ ಕೆಲಸವನ್ನು ಗಂಭೀರವಾಗಿ ಮಾಡಬಾರದು. ಹಿಡಿದ ಕೆಲಸವನ್ನು ಬದ್ಧತೆಯಿಂದ ಮಾಡಬೇಕು ಎಂಬುದರಲ್ಲಿ ನಂಬಿಕೆ ಇಟ್ಟಿದ್ದರು. ನಾವು ಜೀವನದಲ್ಲಿ ಕಳೆದುಕೊಂಡಿದ್ದರ ಬಗ್ಗೆಯೇ ಆಲೋಚಿಸಿದರೆ ನೆಮ್ಮದಿ ಹಾಳಾಗುತ್ತದೆ. ಪಡೆದುಕೊಂಡಿದ್ದರ ಬಗ್ಗೆ ಯೋಚಿಸುತ್ತಾ ಹೋಗಬೇಕು. ನಾನು ಜೀವನದಲ್ಲಿ ಕಳೆದುಕೊಂಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು. ನಾನೊಬ್ಬ ಸಂತೃಪ್ತ ಜೀವಿ ಎಂದು ಮುಕ್ತವಾಗಿ ಹೇಳುತ್ತಿದ್ದುದಾಗಿ ತಿಳಿಸಿದರು.
ಅಂಬರೀಶ್ ಅವರ ಈ ಮಾತುಗಳನ್ನು ಕೇಳಿದಾಗ ನಾವು ದಕ್ಕಿಸಿಕೊಂಡಿರುವ ತತ್ವಶಾಸ್ತ್ರ, ಸಿದ್ಧಾಂತಕ್ಕೆ ಮೀರಿದ ತತ್ವಶಾಸ್ತ್ರ ಮತ್ತು ಸಿದ್ಧಾಂತವನ್ನು ಅಂಬರೀಶ್ ರೂಢಿಸಿಕೊಂಡಿದ್ದರು. ಬುದ್ಧಿಯ ಮೂಲಕ ಮಾತನಾಡುವವರ ಮಾತಿಗೂ-ನಡತೆಗೂ ಸಾಕಷ್ಟು ಅಂತರವಿರುತ್ತದೆ. ಅವರ ಬದುಕು ಪಾರದರ್ಶಕವಾಗಿರುವುದಿಲ್ಲ. ಅಂಬರೀಶ್ ಆಲೋಚನೆಗಳು ಮತ್ತು ಮಾತಿಗೂ ವ್ಯತ್ಯಾಸವನ್ನು ಕಾಣಲಾಗುವುದಿಲ್ಲ. ಸಾಯುವ ಅಂಚಿನಲ್ಲೂ ಬದುಕಬೇಕೆಂದು ಹಪಹಪಿಸುವವರಿಗೆ ಅಂಬರೀಶ್ ಮಾದರಿಯಾಗಿದ್ದಾರೆ ಎಂದರು.
ರಾಜಕಾರಣವನ್ನು ಹಲವರು ಹಠವಾಗಿ ತೆಗೆದುಕೊಳ್ಳುತ್ತಾರೆ. ಇದರಿಂದ ದ್ವೇಷ, ಅಸಹನೆ, ಸಿಟ್ಟು ಹುಟ್ಟಿಕೊಳ್ಲುತ್ತದೆ. ಆದರೆ, ಅಂಬರೀಶ್ ಚುನಾವಣೆಗೆ ಸೀಮಿತವಾಗಿ ರಾಜಕಾರಣ ತೆಗೆದುಕೊಂಡರು. ಅವರನ್ನು ಎಲ್ಲಾ ಪಕ್ಷಗಳಲ್ಲಿ ಪ್ರೀತಿಸುವವರೂ ಇದ್ದಾರೆ. ಪ್ರಶಂಸಿಸುವವರೂ ಇದ್ದಾರೆ. ಅವರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಅವರು ಸದಾ ನಮ್ಮೊಡನೆಯೇ ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಟ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಹನಕೆರೆ ಶಶಿಕುಮಾರ್ ಇತರರಿದ್ದರು.