ಪದಗಳಲ್ಲಿ ವರ್ಣಿಸಲಾಗದ ಮಾತನ್ನು ಛಾಯಾಚಿತ್ರ ವಿವರಿಸುತ್ತೆ

| Published : Aug 31 2024, 01:43 AM IST

ಸಾರಾಂಶ

ಹುಮನಾಬಾದ್ ಪಟ್ಟಣದ ಹೊರವಲಯದ ಖಾಸಗಿ ಆದರ್ಶ ರೆಸ್ಟೋರೆಂಟ್‌ನಲ್ಲಿ ತಾಲೂಕು ಮಟ್ಟದ ಛಾಯಾಗ್ರಹಕ ಸಂಘದಿಂದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಛಾಯಾಚಿತ್ರಕ್ಕೆ ಇರುವ ಸಾಮರ್ಥ್ಯವೇ ಅಂತಹದ್ದು, ಪದಗಳಲ್ಲಿ ವರ್ಣಿಸಲು ಸಾಧ್ಯವಾದ ಅದೇಷ್ಟೋ ಮಾತು ಒಂದು ಚಿತ್ರ ತಿಳಿಸುತ್ತದೆ ಎಂದು ಹಿರೇಮಠ ಸಂಸ್ಥಾನ ವೀರ ರೇಣುಕ ಗಂಗಾಧರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹೊರವಲಯದ ಖಾಸಗಿ ಆದರ್ಶ ರೆಸ್ಟೋರೆಂಟ್‌ನಲ್ಲಿ ತಾಲೂಕು ಮಟ್ಟದ ಛಾಯಾಗ್ರಹಕ ಸಂಘದಿಂದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಾಯಾಚಿತ್ರಗಳು ಇತಿಹಾಸದ ಅನೇಕ ಘಟನೆಗಳ ಬಗ್ಗೆ ಸ್ಟಷ್ಟ ಸಂದೇಶ ಜನರಿಗೆ ತಲುಪಿಸುವ ಶಕ್ತಿ ಇಂದಿಗೂ ಹೊಂದಿದೆ. ಜತೆಗೆ ಮಾಧ್ಯಮ ರಂಗವೂ ವಿಶಿಷ್ಟ ಬರವಣಿಗೆ ಮೂಲಕ ಜ್ಞಾನ ರೂಪಿಸುವಲ್ಲಿ ಸ್ಪಷ್ಟ ಸಂದೇಶ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘಗಳು ಮುಂದಿನ ಪೀಳಿಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳ, ಪ್ರೇರಣೆ ನಿಡುವ ಮೂಲಕ ಬೆಳೆಸುವ ಕಾರ್ಯವಾಗಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್ ನಾಗೇಶ ಮಾತನಾಡಿ, ನಮ್ಮ ಪರಂಪರೆ ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆಮಾರುಗಳ ದಾಖಲೀಕರಣವನ್ನು ತಮ್ಮ ಕ್ಯಾಮೆರಾ ಮುಖಾಂತರ ಸೆರೆ ಹಿಡಿದು ಇಡಿ ಜಗತ್ತಿಗೆ ತೋರಿಸುವಲ್ಲಿ ಸಾಕ್ಷಿಯಾಗಿಸಿದ್ದಾರೆ. ಅಂಥ ಛಾಯಾಗ್ರಾಹಕರು ಸಮಾಜದ ಅವಿಭಾಜ್ಯ ಅಂಗ ಜೊತೆಗೆ ಸಾಂಸ್ಕ್ರತಿಕ ರಾಯಭಾರಿಗಳೆಂದರೆ ತಪ್ಪಲ್ಲ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಇಮ್ರಾನ್ ಪಟೇಲ್ ಮಾತನಾಡಿ, ಚಿತ್ರ ಸೆರೆಹಿಡಿಯಲು ಒಂದೊಳ್ಳೆ ಕ್ಯಾಮೆರಾ ಇದ್ದರೆ ಸಾಲದು. ಆ ಚಿತ್ರವನ್ನು ಕ್ಯಾಮೆರಾ ಕಣ್ಣೊಳಗೆ ಸೆರೆ ಹಿಡಿಯುವ ಕಲೆಯೂ ಇರಬೇಕು. ಫೋಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಕಲೆಯೇ ಸರ್ವಸ್ವ ಎಂದರು.

ಉಪಾಧ್ಯಕ್ಷ ರಾಜುರೆಡ್ಡಿ ಮಾತನಾಡಿ, ಛಾಯಾಗ್ರಹಣ ಕ್ಷೇತ್ರ ಕೇವಲ ಉದ್ಯೋಗದ ದೃಷ್ಟಿಯಿಂದ ನೋಡದೆ ಜೀವನದ ಆತ್ಮೀಯ ಸಂಬಂಧ ಅಪರೂಪದ ಕ್ಷಣ ಸೆರೆಹಿಡಿದು ಶಾಶ್ವತವಾಗಿ ಸಂಗ್ರಹ ಯೋಗ್ಯ ಕೆಲಸ ಮಾಡುತ್ತಿದೆ. ಇಂಥ ಕಾರ್ಯ ಮಾಡುತ್ತಿರುವ ಛಾಯಾಗ್ರಾಹಕರಿಗೆ ಸರ್ಕಾರ ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ರಾಜ್ಯ ಪ್ರಮುಖ ರವಿಶಂಕರ ಆರ್, ಜಿ.ಪರಮೇಶ್ವರ, ಪ್ರಧಾನ ಕಾರ್ಯದರ್ಶಿ ಗುರುನಾಥ ಪಂಚಾಳ, ಖಜಾಂಚಿ ರಾಜಣ್ಣಾ ಮುಗಳಿ, ರಮೇಶ ಮರುರ, ರಮೇಶ ಸಜ್ಜನಶಟ್ಟಿ, ಅಶೋಕ ಸಜ್ಜನಶಟ್ಟಿ, ಮಲ್ಲು ಮರೂರ, ಸಂತೋಷ ಪರಿಟ್, ಬಸವರಾಜ ತೋಟದ್, ದಿನೇಶ ಗೊಂಟಲ್, ಮಾಣಿಕರೆಡ್ಡಿ, ಚಂದು ಪ್ರೀಯಾ, ರೂಪೇಶ ಗೊಂಟಲ್, ಸಂಜೀವಕುಮಾರ, ಪವನಸಿಂಗ ಠಾಕೂರ, ನಿಸಾರ ಅಹ್ಮದ್, ಸೇರಿದಂತೆ ಅನೇಕರಿದ್ದರು.