ಸಾರಾಂಶ
ನೇಮೋತ್ಸವ ನಡೆಯುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ದೈವವೇ ಕೆಂಡಾಮಂಡಲವಾದ ಘಟನೆ ನಡೆದಿದೆ. ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ(ಸವಾರಿ) ಹೊರಡುವುದಿಲ್ಲ ಎಂದು ದೈವ ಖಡಾಖಂಡಿತ ನುಡಿಯುವ ಮೂಲಕ ಶುಚಿತ್ವದ ಪಾಠ ಮಾಡಿದ ಘಟನೆ ಮಂಗಳೂರು ಹೊರವಲಯದ ಕನೀರುತೋಟ ಎಂಬಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನೇಮೋತ್ಸವ ನಡೆಯುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ದೈವವೇ ಕೆಂಡಾಮಂಡಲವಾದ ಘಟನೆ ನಡೆದಿದೆ. ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ(ಸವಾರಿ) ಹೊರಡುವುದಿಲ್ಲ ಎಂದು ದೈವ ಖಡಾಖಂಡಿತ ನುಡಿಯುವ ಮೂಲಕ ಶುಚಿತ್ವದ ಪಾಠ ಮಾಡಿದ ಘಟನೆ ಮಂಗಳೂರು ಹೊರವಲಯದ ಕನೀರುತೋಟ ಎಂಬಲ್ಲಿ ನಡೆದಿದೆ. ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಬುಧವಾರ ಮಲಯಾಳ ಚಾಮುಂಡಿ ದೈವದ ಕಟ್ಟೆ ಜಾತ್ರೆ ನಡೆದಿತ್ತು. ರಾತ್ರಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿ ಕಂಡದ್ದೇ ಕೋಪಕ್ಕೆ ಕಾರಣ.‘ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಹೋಗೋದಿಲ್ಲ’ ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ಹೇಳಿದೆ. ಇದರಿಂದ ಕಕ್ಕಾಬಿಕ್ಕಿಯಾದ ಆಡಳಿತ ಮಂಡಳಿ ತಕ್ಷಣ ತ್ಯಾಜ್ಯವನ್ನು ಎತ್ತಿದೆ. ಅಲ್ಲದೆ ವಲಸರಿ ಹೊರಡುವ ದೀಪದ ದಳಿಯ ಬದಿಯಲ್ಲಿ ಇರುವ ಸಂತೆಗಳನ್ನು ಎತ್ತಂಗಡಿ ಮಾಡಿದೆ. ಆ ಬಳಿಕವೇ ದೈವ ವಲಸರಿ ಹೊರಡಿದೆ. ಒಟ್ಟಿನಲ್ಲಿ ದೈವವೂ ಸ್ವಚ್ಛತೆಯ ಪಾಠ ಮಾಡುವಲ್ಲಿವರೆಗೆ ಸಮಾಜ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಈ ಘಟನೆ ನಿದರ್ಶನ ಎನಿಸಿದೆ.