ಮಾರುಕಟ್ಟೆಯಲ್ಲಿ ಕೊಳೆಯುತ್ತಿರುವ ಹೂ ರಾಶಿ

| Published : Sep 10 2025, 01:03 AM IST

ಸಾರಾಂಶ

ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲಂದರಲ್ಲಿ ಬಿಸಾಡಿಹೋಗುವಂತಾಗಿದೆ. ಮತ್ತೊಂದೆಡೆ 150 ರುಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಯಲು ಸೀಮೆಯ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಗಲು ರಾತ್ರಿ ಎನ್ನದೆ ಪಾತಾಳದಿಂದ ಅಂರ್ತಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನು ಬೆಳೆದಿದ್ದಾರೆ. ಆದರೆ ಈ ನಡುವೆ ಸುರಿದ ಮಳೆ ಈಗ ಆ ಜಿಲ್ಲೆಯ ಹೂ ಬೆಳಗಾರರ ಬದುಕಿಗೆ ಬರೆ ಹಾಕಿದೆ.

ರಾಶಿ ರಾಶಿ ಹೂಗಳನ್ನು ಬಿಕರಿಯಾಗದ ಕಾರಣ ಹೂ ಬೆಳೆಗಾರರು ಸುಖಾಸುಮ್ಮನೆ ಹೂವಿನ ಮಾರುಕಟ್ಟೆಯಲ್ಲಿಯೇ ಬಿಸಾಡಿ ಹೋಗುತ್ತಿರುವ ಘಟನೆ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ನಡೆದಿದೆ. ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ.

ಚೆಂಡು ಹೂ ದರ ಕೆಜಿಗೆ ₹1

ಕಳೆದ 1 ತಿಂಗಳ ಹಿಂದೆ ಅದರಲ್ಲೂ ವರ ಮಹಾಲಕ್ಷ್ಮೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷ್ಮೀ ಹಬ್ಬದಂದು 1 ಕೆಜಿ ಚೆಂಡು ಹೂ 90 ರಿಂದ 120 ರೂಪಾಯಿಗೆ ಮಾರಾಟವಾಗಿತ್ತು ಆದ್ರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 1 ರೂಪಾಯಿ 2 ರೂಪಾಯಿ ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮೀ ಮತ್ತು ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂ 300 ರಿಂದ ೬೦೦ ರೂಪಾಯಿಗೂ ಮಾರಾಟವಾಗಿದೆ. ಆದ್ರೆ ಈಗ 5 ರೂಪಾಯಿ 10 ರೂಪಾಯಿಗೆ ಬೆಲೆ ಇಳಿದಿದೆ.

ಗುಲಾಬಿ ದರ ಕೆಜಿಗೆ ₹10

ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲಂದರಲ್ಲಿ ಬಿಸಾಡಿಹೋಗುವಂತಾಗಿದೆ. ಮತ್ತೊಂದೆಡೆ 150 ರುಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ.

ಪಿತೃ ಪಕ್ಷ ವಾದ ಕಾರಣ ಕರ್ನಾಟಕ, ಆಂಧ್ರಪ್ರದೇಶ,ತೆಲಾಂಗಣದಲ್ಲಿ ಮತ್ತು ತಮಿಳುನಾಡಿನಲ್ಲಿ .ಈಗ ಮದುವೆ-ಮುಂಜಿಗಳು,ಸೇರಿದಂತೆ ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಆಂಧ್ರಪ್ರದೇಶ,ತೆಲಾಂಗಣ ಮತ್ತು ತಮಿಳುನಾಡಿನಿಂದ ವರ್ತಕರು ಹೂ ಕೊಳ್ಳಲು ಬರುತ್ತಿಲ್ಲ. ಮಳೆಯಿಲ್ಲದೆ ಓಣ ಹವೆ ಇದ್ದ ಚಿಕ್ಕಬಳ್ಳಾಪುರದಲ್ಲಿ ಈಗ ಧಿಡೀರ್ ಮಳೆ ಬಂದ ಕಾರಣ ಹೂಗಳ ಇಳುವರಿಯಲ್ಲಿ ಹೆಚ್ಚಳವಾಗಿ ಹೂ ಬೆಲೆ ಕುಸಿದಿದೆ ಅಂತಾರೆ ವರ್ತಕರು.

ಸಾಲ ತೀರಿಸುವ ಸಮಸ್ಯೆ

ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಬೆಲೆ ಕುಸಿತದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೂ ಬಿಸಾಡಿ ಬರಿಗೈಯಲ್ಲೇ ಮನೆಗೆ ಹೋಗುವಂತಾಗಿದೆ. ನದಿ ನಾಲಾಗಳಿಲ್ಲದ ಬರಡು ಜಿಲ್ಲೆ ನಮ್ಮದು. ನೀರಿಗಾಗಿ ಸಾಲ -ಸೋಲ ಮಾಡಿ ಬೋರ್ ವೆಲ್ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವರಿಲ್ಲಾ. 40 ಕೆಜಿ ಹೂವಿನ ಬ್ಯಾಗ್ ಮಾರಿದರೂ 200 ರಿಂದ 400 ರು.ಗಳು ಬರುತ್ತದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು. ಹೂ ಬೆಳೆಗಾರರಿಗೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ.