ಸಾರಾಂಶ
ದಾಂಡೇಲಿ:ದಾಂಡೇಲಿ-ಕಾರವಾರ ರಸ್ತೆಯಲ್ಲಿ ಬರುವ ಕಾಳಿ ನದಿ ಸೇತುವೆಯ ಅಕ್ಕಪಕ್ಕದಲ್ಲಿ ಬೆಳೆದ ಗಿಡ-ಗಂಟಿಯಿಂದ ಸೇತುವೆ ಬಾಳಿಕೆಗೆ ಧಕ್ಕೆಯಾಗುತ್ತಿದೆ. ಗಿಡಗಳು ಬೆಳೆದು ಸೇತುವೆ ಮೇಲ್ಭಾಗಕ್ಕೆ ಚಾಚಿಕೊಳ್ಳುತ್ತಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಲೋಕೋಪಯೋಗಿ ಇಲಾಖೆ ಇವುಗಳ ತೆರವಿಗೆ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಸುಮಾರು ೫೦ ವರ್ಷಗಳ ಹಿಂದೆ ದಾಂಡೇಲಿ ಕುಳಗಿ ರಸ್ತೆಯ ಕಾಳಿ ನದಿಗೆ ನಿರ್ಮಿಸಿದ ಈ ಸೇತುವ ಜೋಯಿಡಾ-ಕಾರವಾರ, ಯಲ್ಲಾಪುರ-ಶಿರಸಿ, ಉಳವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯವೂ ಸಾವಿರಾರು ಪ್ರವಾಸಿ ವಾಹನಗಳು ಈ ಸೇತುವೆ ಮೇಲೆ ಓಡಾಡುತ್ತವೆ. ಪ್ರವಾಸಿಗರು ಈ ಸೇತುವೆ ಮೇಲೆ ನಿಂತು ಕಾಳಿನದಿಯ ಸೌಂದರ್ಯ ಸವಿಯುತ್ತಾರೆ. ಆದರೆ, ಸೇತುವೆ ಅಕ್ಕಪಕ್ಕ ಬೆಳೆದಿರುವ ಆಲದ ಗಿಡ ಸೇರಿದಂತೆ ಹಲವು ಗಿಡಗಳು ಸೇತುವೆ ಬಾಳಿಕೆಗೆ ಅಪಾಯ ಉಂಟು ಮಾಡುತ್ತಿವೆ. ಪ್ರತಿ ಮಳೆಗಾಲಕ್ಕಿಂತ ಪೂರ್ವದಲ್ಲಿ ಸೇತುವೆ ಕೆಳಗೆ ಬೆಳೆದ ಗಿಡ ಕಡಿದು ಹಾಕುತ್ತಿದ್ದರು. ಆದರೆ ಕಳೆದ ವರ್ಷದಿಂದ ತೆಗೆದಿಲ್ಲ.ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ಸ್ಥಳೀಯರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸೇತುವೆ ಎರಡು ಅಕ್ಕಪಕ್ಕದಲ್ಲಿ ಬೆಳೆದು ನಿಂತಿರುವ ಗಿಡ-ಗಂಟೆ ತೆಗೆಯಲು ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಹಲವು ಬಾರಿ ಗಮನಕ್ಕೆ ತಂದಿದ್ದೇವೆ. ಆದರೆ ಈ ವರೆಗೂ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಕೋಗಿಲ ಬನದ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ ನಾಯ್ಕ ಹೇಳುತ್ತಾರೆ.