ಸಾರಾಂಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನಜಾಗೃತಿ ವೇದಿಕೆ ಕಾರ್ಯಕರ್ತರು ನರಗುಂದ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.
ನರಗುಂದ: ಪಕ್ಕದ ಬಾಂಗ್ಲಾದೇಶದಲ್ಲಿ ಮತಾಂಧ ಶಕ್ತಿಗಳು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ, ಸುಲಿಗೆಗಳನ್ನು ನಡೆಸುತ್ತಿವೆ. ಸ್ವಾಮೀಜಿಗಳ ಬಂಧನ ಮತ್ತು ಮಹಿಳೆಯರ ಮೇಲೆ ಅತ್ಯಾಚಾರದಂತಹ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ಭಾರತ ಸರ್ಕಾರ ಮೌನವಹಿಸದೇ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ವಕೀಲ ರಾಜೇಂದ್ರ ಪಾಟೀಲ ಒತ್ತಾಯಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜನಜಾಗೃತಿ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಿದ ಬಳಿಕ ಅವರು ಮಾತನಾಡಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳು, ಅಂಗಡಿಗಳ ಮೇಲೆ ದಾಳಿ ನಡೆಯುತ್ತಿವೆ. ಹಿಂದೂ ಮಹಿಳೆಯರು, ಮಕ್ಕಳು, ವಯಸ್ಸಾದ ಹಿರಿಯರನ್ನು ಲೆಕ್ಕಿಸದೆ ಅವರ ಮೇಲೆ ಮಾರಣಾಂತಿಕ ಹಲ್ಲೆಗಳು ಆಗುತ್ತಿವೆ. ಹಿಂದೂ ದೇವಾಲಯಗಳು, ಮಠ-ಮಾನ್ಯಗಳನ್ನು ಧ್ವಂಸ ಮಾಡಿ, ಲೂಟಿ ಮಾಡುತ್ತಿದ್ದಾರೆ. ಹಿಂದೂ ಸನ್ಯಾಸಿಗಳು, ಮಠಾಧೀಶರು ಹಾಗೂ ಆಧ್ಯಾತ್ಮಿಕ ಗುರುಗಳ ಮೇಲೆ ಹಲ್ಲೆಗಳು ಆಗುತ್ತಿವೆ ಮತ್ತು ಅವರ ಮೇಲೆ ದೇಶದ್ರೋಹದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ವಿನಾಕಾರಣ ಬಂಧನದಲ್ಲಿ ಇರಿಸುತ್ತಿದ್ದಾರೆ. ಹಿಂದೂ ಜನಾಂಗದ ಮೇಲೆ ಅಮಾನವೀಯ ದೌರ್ಜನ್ಯಗಳು ನಡೆಯುತ್ತಿವೆ. ಈಗಾಗಲೇ ಅದೆಷ್ಟೋ ಹಿಂದೂಗಳ ಕಗ್ಗೊಲೆ ಆಗಿದೆ. ಹಿಂದೂಗಳ ಜೀವನವು ಬಹಳ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಬೋಳಶೆಟ್ಟಿ ಮಾತನಾಡಿ, ಬಾಂಗ್ಲಾದೇಶದ ಹಿಂದೂಗಳಿಗೆ ಸಹಾಯಹಸ್ತದ ಆವಶ್ಯಕತೆ ತುಂಬಾ ಇದೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರವು ಹಿಂದೂಗಳ ನೆರವಿಗೆ ಧಾವಿಸಲೇಬೇಕು. ಇದು ನಮ್ಮ ದೇಶದ ಕರ್ತವ್ಯ ಕೂಡಾ ಆಗಿದೆ. ಆದ್ದರಿಂದ ರಾಷ್ಟ್ರಪತಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಶಿರಸ್ತೇದಾರ್ ಪರಶುರಾಮ ಕಲಾಲ ಮನವಿ ಸ್ವೀಕರಿಸಿದರು. ಸಂಗಣ್ಣ ಕಳಸಾ, ಸಂಗಪ್ಪ ಪೂಜಾರ, ಎಸ್.ಎಸ್. ಪಾಟೀಲ, ನಾಗೇಶ ಅಪ್ಪೋಜಿ, ನಿಂಗಪ್ಪ ನಾಗನೂರ, ಶಂಕರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ವಿಠ್ಠಲ ಗಾಯಕವಾಡ, ಗಣೇಶ ಮೋಟೆ, ಎಚ್.ಪಿ. ಮುದ್ದನಗೌಡ್ರ, ವಿಠ್ಠಲ ಮುಧೋಳೆ, ಶೇಖರ ಪೂಜಾರ, ಮಹಾದೇವ ಕುಂಬಾರ, ಮಹಾದೇವ ಹಣಗಿ, ಚನಬಸ್ಸು ತುಮ್ಮಿನಕಟ್ಟಿ, ಬಸವರಾಜ ವಿಠ್ಠೋಜಿ, ಮಹಾದೇವ ಬಾಳಿಕಾಯಿ, ಪ್ರವೀಣ ಗಡೇಕಾರ, ಕಿರಣ ಮಿಸ್ಕಿನ ಇದ್ದರು.