ಯುವ ಸಾಹಿತಿ ನವೀದ ಮುಲ್ಲಾ ಅವರು "ಕಾವ್ಯಸುಧೆ " ಕವನ ಸಂಕಲನದಲ್ಲಿ ತಾಯಿಯ ವಾತ್ಸಲ್ಯ, ಅಗಲಿಕೆಯ ನೋವು ಸೇರಿದಂತೆ ವಿವಿಧ ಭಾವನೆಗಳನ್ನು ಕವಿತೆಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.

ಕಾವ್ಯಸುಧೆ ಕವನ ಸಂಕಲನ ಬಿಡುಗಡೆಗೊಳಿಸಿದ ಮಾಜಿ ಸಭಾಪತಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಯುವ ಸಾಹಿತಿ ನವೀದ ಮುಲ್ಲಾ ಅವರು "ಕಾವ್ಯಸುಧೆ " ಕವನ ಸಂಕಲನದಲ್ಲಿ ತಾಯಿಯ ವಾತ್ಸಲ್ಯ, ಅಗಲಿಕೆಯ ನೋವು ಸೇರಿದಂತೆ ವಿವಿಧ ಭಾವನೆಗಳನ್ನು ಕವಿತೆಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ ಎಂದು ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಯುವ ಸಾಹಿತಿ ನವೀದ ಮುಲ್ಲಾ ಅವರ 4ನೇ ಕೃತಿಯಾದ "ಕಾವ್ಯಸುಧೆ " ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾವ್ಯದಲ್ಲಿ ಹಾಸ್ಯ, ಮರ್ಮ ಹಾಗೂ ವಿಡಂಬನೆಗಳಿಗೂ ಅವಕಾಶವಿರಬೇಕು. ತಂದೆ-ತಾಯಿಯ ಕಷ್ಟಗಳನ್ನು ಕಂಡು ಬೆಳೆದ ನಾವು ಇಂದು ಈ ಹಂತಕ್ಕೆ ಬಂದಿದ್ದೇವೆ. ಜಗತ್ತಿನಲ್ಲಿ ತಾಯಿಗಿಂತ ಶ್ರೇಷ್ಠ ವ್ಯಕ್ತಿ ಮತ್ತೊಬ್ಬರಿಲ್ಲ. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಸಂಗ್ರಹಿಸುವುದಷ್ಟೇ ಮುಖ್ಯವಲ್ಲ, ಅವುಗಳನ್ನು ಓದಿ ಅದರಲ್ಲಿನ ವಿಚಾರ ಅರಿತುಕೊಳ್ಳಬೇಕು ಎಂದರು.

ಸಾಹಿತಿ ಅರುಣಕುಮಾರ ಹಬ್ಬು ಮಾತನಾಡಿ, ಕವಿಯ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ಅಗತ್ಯ. ಕಾವ್ಯಸುಧೆಯ ಕವಿತೆಗಳಲ್ಲಿ ಮಾನವೀಯ ತುಡಿತ, ಸಾಮಾಜಿಕ ಕಳಕಳಿ ಹಾಗೂ ಮೌಲ್ಯಗಳು ಪ್ರತಿಬಿಂಬಿತವಾಗಿವೆ ಎಂದು ಹೇಳಿದರು.

ಕವಿ ನವೀದ ಮುಲ್ಲಾ ಮಾತನಾಡಿ, 69 ಕವಿತೆ ಒಳಗೊಂಡ "ಕಾವ್ಯಸುಧೆ "ಯನ್ನು ಓದುಗರಿಗೆ ಸಮರ್ಪಿಸುತ್ತಿದ್ದೇನೆ. ಈ ಕೃತಿಯನ್ನು ನನ್ನ ತಾಯಿಗೆ ಅರ್ಪಿಸಿದ್ದೇನೆ ಎಂದರು. ಹು-ಧಾ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು.

ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಅಲ್ತಾಫ್ ಹಳ್ಳೂರ ಮಾತನಾಡಿದರು. ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಸತೀಶ ಮೆಹರವಾಡೆ ಸೇರಿದಂತೆ ಹಲವರಿದ್ದರು. ನೂರ ಅಹ್ಮದ ಪಠಾಣ ನಿರೂಪಿಸಿದರು.