ಕವಿ ಪ್ರಜಾಪ್ರಭುತ್ವದ ನಿಲುವುಗಳಿಗೆ ಬದ್ಧವಾಗಿರಬೇಕು

| Published : Nov 10 2024, 01:43 AM IST

ಸಾರಾಂಶ

ಸಿರಿಗೆರೆ: ಕವಿಗಳು ಜಾತಿವಾದಿ, ಕೋಮುವಾದಿ ಇತ್ಯಾದಿ ಬಂಧಗಳಿಗೆ ಸೀಮಿತವಾಗದೆ ಅವೆಲ್ಲವುಗಳನ್ನು ದೂರವಿಟ್ಟು ಪ್ರಜಾಪ್ರಭುತ್ವವಾದಿಯಾಗಿರಬೇಕು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.‌ಮುಕುಂದರಾಜ್‌ ಕಿವಿ ಮಾತು ಹೇಳಿದರು.

ಸಿರಿಗೆರೆ: ಕವಿಗಳು ಜಾತಿವಾದಿ, ಕೋಮುವಾದಿ ಇತ್ಯಾದಿ ಬಂಧಗಳಿಗೆ ಸೀಮಿತವಾಗದೆ ಅವೆಲ್ಲವುಗಳನ್ನು ದೂರವಿಟ್ಟು ಪ್ರಜಾಪ್ರಭುತ್ವವಾದಿಯಾಗಿರಬೇಕು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.‌ಮುಕುಂದರಾಜ್‌ ಕಿವಿ ಮಾತು ಹೇಳಿದರು.ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿಗಳಲ್ಲಿ ಪ್ರಜಾಪ್ರಭುತ್ವ ಪ್ರಜ್ಞೆ ಇರಬೇಕು. ಸಂವಿಧಾನದ ಹಕ್ಕುಗಳ ಪ್ರಜ್ಞೆಯನ್ನು ಜನರಿಗೆ ತಲುಪಿಸುವುದು ಕವಿಯ ಕೆಲಸ. ಬರವಣಿಗೆಗೆ ಅಂತಹ ವಿಶೇಷ ಶಕ್ತಿ ಇರುವುದರಿಂದ ಅವರು ಸಂವಿಧಾನದ ಬಲವನ್ನು ಬಳಸಿಕೊಳ್ಳಬೇಕು, ಇನ್ನಷ್ಟು ಗಟ್ಟಿಯಾಗಬೇಕು ಎಂದರು.ಕವಿತೆಗಳನ್ನು ಬರೆಯುವುದು ಸುಲಭವಲ್ಲ. ಬರೆದ ಕವಿತೆಗಳನ್ನು ಓದುಗರಿಗೆ ತಲುಪಿಸುವ ಕಡೆ ಗಮನ ನೀಡಬೇಕು ಎಂದ ಅವರು, ಕನ್ನಡದ ಪರಂಪರೆ ಸಾಹಿತ್ಯಕವಾಗಿ ಬಹು ಗಟ್ಟಿಯಾಗಿದೆ. ನಮ್ಮ ಜನಪದರು ಅಕ್ಷರದಿಂದ ವಂಚಿತರಾಗಿದ್ದರೂ, ಮಂಟೆಸ್ವಾಮಿ, ಮಲೆಮಹಾದೇಶ್ವರ ಮುಂತಾದ ಮಹಾಕಾವ್ಯಗಳನ್ನು ರಚಿಸಿದರು ಎಂದು ಹೇಳಿದರು.

ಮಹಿಳೆಯರು ಹಿಂದಿನಿಂದಲೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಈಗ ಎಲ್ಲಾ ಹಕ್ಕುಗಳೂ ದೊರಕಿವೆ. ಅವರು ಈಗ ಎಲ್ಲವನ್ನೂ ಸಾಧಿಸಬಹುದು. ಅವರಲ್ಲಿಯೂ ಈಗ ಕವಿತೆ ಬರೆಯುವವರ ಸಂಖ್ಯೆ ಜಾಸ್ತಿ ಇದೆ ಎಂದರು.ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತರಳಬಾಳು ಮಠಕ್ಕೆ ಶತಮಾನಗಳ ಹಿಂದಿನ ಇತಿಹಾಸವಿದೆ. ನಾಡಿನ ಜನರ ಘನತೆ, ಗೌರವ, ವಿಶ್ವಾಸಗಳಿಗೆ ಮಠ ಪಾತ್ರವಾಗಿದೆ. ಸಿರಿಗೆರೆಯಲ್ಲಿ ಮಠದಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದೆ ಎಂದರು.ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗದ್ಯ ಭೂಮಿಯ ಮೇಲೆ ಹರಿಯುವ ಸಮತಲ ಜಲವಾದರೆ, ಕವಿತೆ ಪದ್ಯ ಕಲ್ಲುಬಂಡೆಗಳ ಮಧ್ಯೆ ಜುಳುಜುಳು ನಾದ ಹೊಮ್ಮಿಸಿ ಹರಿಯುತ್ತದೆ. ಕವಿತೆ ಎಲ್ಲವನ್ನು ಶಬ್ದಗಳಲ್ಲಿ ಹೇಳದೆ ಓದುಗರ ಕಲ್ಪನೆಗೆ ಬಿಡುತ್ತದೆ ಎಂದರು.ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಕಲಾವಿದ ಚಂದ್ರಶೇಖರ ಸಿರಿವಂತೆ ಅವರನ್ನು ತರಳಬಾಳು ಶ್ರೀಗಳು ಪುರಸ್ಕರಿಸಿದರು.

ಬಳಿಕ ಮಾತನಾಡಿದ ಚಂದ್ರಶೇಖರ್‌ ಸಿರಿವಂತೆ, ಶಿಕ್ಷಣದ ಮೂಲಕ ಮಕ್ಕಳಲ್ಲಿ ನಾವು ಅಮೃತ ಬಿತ್ತಬೇಕಿತ್ತು. ಆದರೆ ಶಿಕ್ಷಣವನ್ನು ಅಂಕಗಳಿಗೆ ಮಿತಿಗೊಳಿಸಿ ಅವರ ಮನಸ್ಸಿನಲ್ಲಿ ವಿಷದ ಬೀಜವನ್ನು ಬಿತ್ತುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಬೇವು ಬಿತ್ತಿ ಬೆಲ್ಲ ತೆಗೆಯುವ ನಿಷ್ಪ್ರಯೋಜಕ ಕೆಲಸ ಆಗುತ್ತಿದೆ ಎಂದರು.ಎನ್.ಟಿ.ಯರ್ರಿಸ್ವಾಮಿ, ಜಿ.ಎ.ಜಗದೀಶ್‌, ಸಿ.ಕೃಷ್ಣನಾಯ್ಕ, ವಿಜಯಕಾಂತ ಪಾಟೀಲ್‌, ನಾಗರಾಜ ಸಿರಿಗೆರೆ, ಎನ್.ಎಸ್.‌ಹೇಮಂತರಾಜು, ಬಿ.ಎಂ.ಗುರುನಾಥ್‌, ಮಂಜಯ್ಯ ದೇವರಮನಿ, ಜಬೀವುಲ್ಲಾ ಎಂ.ಅಸದ್‌, ಟಿ.ವಿ.ಉಮೇಶ್‌, ಪ್ರತಿಭಾ ಬಳ್ಳಿಗಾವಿ, ಎಂ.ತಿಪ್ಪೇಸ್ವಾಮಿ ಉಪ್ಪಾರಹಳ್ಳಿ, ಎಚ್.‌ಶಿವಮೂರ್ತಿ, ಎಂ.ಜಿ.ಆರ್.‌ದಾಮಿನಿ, ಶ್ರೀರಕ್ಷಾ, ಸರೋಜಾ ಪಾಂಡೋಮಟ್ಟಿ ಕವಿತೆಗಳನ್ನು ಓದಿದರು.ಎಂ.ಬಿ.ಗುರುನಾಥ್‌ ಆಶಯ ನುಡಿಗಳನ್ನಾಡಿ ಅಂಬೇಡ್ಕರ್‌ ಕುರಿತ ಕವಿತೆ ವಾಚಿಸಿದರು. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿದರು.