ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಕ್ಕರ ನಾಗರಾಜು ಅವರ ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿ ಡಾ.ಎಲ್. ಹನುಮಂತಯ್ಯ ಉದ್ಘಾಟನೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕವಿಯಾದವನು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜ ಪರಿವರ್ತನೆಯ ರೂವಾರಿಯಾಗಿ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.ತಾಲೂಕಿನ ಧರ್ಮಪುರ ಹೋಬಳಿಯ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಧರ್ಮಪುರ ಹೋಬಳಿ ಕಸಾಪ ಘಟಕ, ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಗೌತಮಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಕ್ಕರ ನಾಗರಾಜು ಅವರ ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯಕವಾದ ಕಾರ್ಯಕ್ರಮಗಳು ನಗರ ಕೇಂದ್ರದಿಂದ ಬಿಡುಗಡೆ ಪಡೆದು ಇಂದು ಗ್ರಾಮೀಣ ಪ್ರದೇಶಗಳ ಕಡೆ ಮುಖ ಮಾಡಿವೆ. ನಗರಗಳು ವ್ಯಾಪಾರೀಕರಣದ ಕೇಂದ್ರಗಳಾಗಿವೆ. ಇಂತಹ ಸಮಯದಲ್ಲಿ ಇಂದು ಹಳ್ಳಿಗಳು ನಗರಕ್ಕೆ ನಾಗರಿಕತೆಯ ಪಾಠ ಹೇಳಿಕೊಡುವ ಮಟ್ಟಿಗೆ ಬೆಳೆದಿವೆ.

ವಿಶ್ವದ ಬಹುತೇಕ ಸಾಹಿತಿಗಳು, ತನ್ನ ಊರು ಕೇರಿಯ ಕಥನಗಳನ್ನು ಆಯ್ದು ಕೃತಿಗಳನ್ನು ಬರೆದಿದ್ದಾರೆ. ಕನ್ನಡದ ಕವಿಗಳು ಇದಕ್ಕೆ ಹೊರತಾಗದೆ ನಾಡಿನ ಪ್ರಕೃತಿ, ತಾಯಿ ಮಮತೆ, ಮಾನವೀಯ ಸಂಬಂಧಗಳ ಕುರಿತು ಬರೆದಿದ್ದಾರೆ. ಈ ನಿಟ್ಟಿನಲ್ಲಿ ಸಕ್ಕರ ನಾಗರಾಜ್ ಅವರು ಬುದ್ಧ ಕರುಣೆಯ ಹೊತ್ತು ಕವನ ಸಂಕಲನದಲ್ಲಿ ತಮ್ಮ ಬದುಕಿನ ಚಿಂತನೆ ಅವಲೋಕಿಸಿದ ಘಟನೆಗಳ ಕುರಿತು ಬರೆದಿದ್ದಾರೆ ಎಂದರು.

ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಕುರಿತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ವೈಯಕ್ತಿಕ ಬದುಕು ಕವಿತೆಯ ಬರವಣಿಗೆಗೆ ಸ್ಫೂರ್ತಿಯಾಗುತ್ತದೆ. ಬುದ್ಧನ ಪ್ರಜ್ಞೆ ಮತ್ತು ಅಂಬೇಡ್ಕರ್ ಅವರ ಜಾಗೃತಿ ನಮ್ಮೊಳಗೆ ಸ್ವಾಭಿಮಾನವನ್ನು ತಂದುಕೊಡುತ್ತವೆ.

ಬುದ್ಧ ಸಮಾಜಕ್ಕೆ ಪರಂಪರೆಯ ಪ್ರಜ್ಞೆಯಾದರೆ ಹೊತ್ತು ಅನ್ನುವುದು ಅಂಬೇಡ್ಕರ್ ಅವರು ಕೊಟ್ಟ ಜಾಗೃತಿಯಾಗಿದೆ. ಈ ನಡುವೆ

ಕರುಣೆಯನ್ನು ತುಂಬಿಕೊಂಡ ಕವನ ಸಂಕಲನದ ಶೀರ್ಷಿಕೆ ಅರ್ಥಪೂರ್ಣವಾಗಿದೆ.

ಸಹನೆ ಸಾಮರಸ್ಯವನ್ನು ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಮತ್ತೆ ಕಟ್ಟುವ ಕಾಯಕಕ್ಕೆ ಸಾಹಿತ್ಯ ನಮಗೆ ಶಕ್ತಿಯಾಗಿ ಕೆಲಸ ಮಾಡುತ್ತದೆ. ಬರಹಕ್ಕೆ ತುಂಬಾ ಮಹತ್ವವಿದ್ದು ನಮ್ಮ ನೋವನ್ನು ಸಂವೇದನೆಯೊಂದಿಗೆ ಬೆರೆಸುವ ಪರಿಪಾಠಕ್ಕೆ ಸಾಹಿತ್ಯ ಪೂರಕವಾಗಿ ಕೆಲಸಮಾಡುತ್ತದೆ. ಅಕ್ಷರ ನಮ್ಮ ಆಸ್ತಿಯಾಗಿ ಶಕ್ತಿಯಾಗಬೇಕು. ಅಕ್ಷರ ಅರಿವು ಮತ್ತು ಸಂಘಟನೆ ಸ್ವಾಭಿಮಾನದ ಸಂಕೇತಗಳಾಗಬೇಕು. ನಮ್ಮ ಮಾತುಗಳನ್ನು ಹದಗೊಳಿಸಿದಾಗ ಕವಿತೆ ರೂಪುಗೊಳ್ಳುತ್ತದೆ. ಸಾಹಿತ್ಯ ಅನ್ನುವುದು ಮನುಷ್ಯ ಪ್ರೀತಿಯೇ ಆಗಿದ್ದು ಮೌಲ್ಯಾಧಾರಿತ ಚಿಂತನೆ ಆಗಿದೆ ಎಂದರು.

ಪ್ರಾಚಾರ್ಯ ಡಾ.ವಿ.ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಧರ್ಮಪುರ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎಚ್.ಅಶೋಕ್, ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಜಿ.ತಿಮ್ಮರಾಜು, ಕವಿ ಆರ್.ಶಿವಶಂಕರ ಸೀಗೆಹಟ್ಟಿ, ಕೃತಿಯ ಲೇಖಕ ಸಕ್ಕರ ನಾಗರಾಜು, ಪಂಚಲಿಂಗೇಶ್ವರ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಆರ್. ರಘುನಾಥ್, ಮುಖ್ಯ ಶಿಕ್ಷಕ ಜೆ.ಮಂಜುನಾಥ್, ಓ.ರಂಗನಾಥ, ಯುವ ವಕೀಲ ಎಸ್.ಡಿ. ಹನುಮಂತರಾಯ. ಸ್ವಾಭಿಮಾನ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ರಂಗಸ್ವಾಮಿ,ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ಎಂ.ರಮೇಶ್, ಪುಟ್ಟರಾಜನಾಯಕ, ಗಡಾರಿ ಕೃಷ್ಣಪ್ಪ ಲಕ್ಷ್ಮಣ್, ಆರ್‌.ಎ.ಸ್ವಪ್ನ ಮುಂತಾದವರು ಹಾಜರಿದ್ದರು.