ಸಾರಾಂಶ
ಗದಗ: ಸರ್ಕಾರದ ಎಲ್ಲ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಕಂದಾಯ ಇಲಾಖೆಯ ಯೋಜನೆಗಳು ಜನಸಾಮಾನ್ಯರಿಗೆ ಸಮಾಜದಲ್ಲಿ ಸಮಬಾಳು ಕಲ್ಪಿಸುವಲ್ಲಿ ಪೂರಕವಾಗಿವೆ. ಇಂತಹ ಕಂದಾಯ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಹಿಸಲಾಗದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಎಲ್ಲ ಕಂದಾಯ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಮೇಲಿರುವ ವಿಶ್ವಾಸವು ನಿರಂತರವಾಗಿ ಉಳಿಸಿಕೊಳ್ಳುವ ಕೆಲಸ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ನಿರ್ವಹಿಸಬೇಕು. ಇಲಾಖೆಯ ಕಾರ್ಯವ್ಯಾಪ್ತಿ ಅಪರಿಮಿತವಾಗಿದ್ದು, ಅಧಿಕಾರಿ ಸಿಬ್ಬಂದಿಗಳು ಕಾಲಕಾಲಕ್ಕೆ ಸರ್ಕಾರ ನೀಡುವ ಮಾರ್ಗಸೂಚಿಗಳಂತೆ ಕರ್ತವ್ಯ ಪಾಲನೆ ಮಾಡಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ತಾಲೂಕು ಹಂತದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಋತುಮಾನಕ್ಕೆ ತಕ್ಕಂತೆ ಬರ ನಿರ್ವಹಣೆ, ಅತಿವೃಷ್ಟಿ ನಿರ್ವಹಣೆ ಸೇರಿದಂತೆ ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳಿಸುವ ಕಾರ್ಯ ನಿರ್ವಹಿಸಬೇಕು. ಸಮಾಜದ ಕೆಳಸ್ತರದ ವ್ಯಕ್ತಿಗೂ ಯೋಜನೆಗಳ ಸೌಲಭ್ಯ ತಲುಪಿಸುವ ಹೊಣೆಗಾರಿಕೆ ನಮ್ಮದಾಗಿದೆ. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಇಲಾಖೆ ಎಲ್ಲ ಅಧಿಕಾರಿಗಳು ಕರ್ತವ್ಯ ನಿಷ್ಟೆಯಿಂದ ಕಾರ್ಯ ನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕೆಂದು ಸೂಚಿಸಿದರು.ಪರಿಹಾರ ಪ್ರಗತಿ, ತಾಲೂಕು ಕಚೇರಿಗಳ ಕಟ್ಟಡ ಪ್ರಸ್ತಾವನೆ, ಮೃಗಾಲಯ ಭೂ ಸ್ವಾಧೀನ, ಆಧಾರ್ ಸೀಡಿಂಗ್, ದಾಖಲಾತಿಗಳ ನಿರ್ವಹಣೆ, ಭೂಮಿ,ತಹಸೀಲ್ದಾರ ನ್ಯಾಯಾಲಯ ಪ್ರಕರಣಗಳು, ಆರ್.ಟಿ.ಸಿ ಮಿಸ್ ಮ್ಯಾಚ್ ಪ್ರಕರಣಗಳು, ಮೋಜಣಿ, ಕೃಷಿ ಭೂಮಿ ಪರಿವರ್ತನೆ, ಐ.ಪಿ.ಜಿ.ಆರ್.ಎಸ್, ಮುಖ್ಯಮಂತ್ರಿಗಳ ಜನತಾ ದರ್ಶನ, ಸಕಾಲ, ಇ- ಆಫೀಸ್ ಸೇರಿದಂತೆ ವಿವಿಧ ಮಾಸಾಶನಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಎಲ್ಲ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು ಹಾಗೂ ತಹಸೀಲ್ದಾರರು ಕಾಲ ಕಾಲಕ್ಕೆ ತಮ್ಮ ಹಂತದಲ್ಲಿ ಸಭೆಯ ಏರ್ಪಡಿಸಿ ಪ್ರಗತಿ ಕುರಿತು ಪರಿಶೀಲನೆ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಸೇರಿದಂತೆ ಆಯಾ ತಾಲೂಕಿನ ತಹಸೀಲ್ದಾರರು, ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.