ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಜನರ ಕಷ್ಟ ಸುಖಗಳನ್ನು ತಿಳಿದುಕೊಂಡು ಕೆಲಸ ಮಾಡುವ ಸೂಕ್ಷ್ಮತೆ ರಾಜಕಾರಣಿಗಳಿಗೆ ಇರಬೇಕು ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಜನರ ಸಂಕಷ್ಟಗಳನ್ನು ಅರಿತು ಅವುಗಳನ್ನು ಪ್ರಮಾಣಿಕವಾಗಿ ಪರಿಹರಿಸುವಂತಹ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡರೆ ಜನರ ಹೃದಯವನ್ನು ಗೆದ್ದಂತಾಗುತ್ತದೆ ಎಂದರು.ಈ ನಿಲುವುಗಳನ್ನು ಅಳವಡಿಸಿಕೊಂಡು ನಾನು ಕಳೆದ ಎರಡೂ ವರ್ಷಗಳ ಕಾಲ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಆಶೋತ್ತರಗಳ ಅರಿವು ಏನಿದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಎರಡು ವರ್ಷಗಳ ಹಿಂದೆ ರಾಮಗಿರಿ ಬಳಿ ದೊಡ್ಡ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದರಿಂದ ಕರೆಂಟ್ ಸಮಸ್ಯೆಯಿಲ್ಲದಂತಾಗಿದೆ ಎಂದರು.
ಕೇವಲ ರಸ್ತೆ ಮತ್ತು ನೀರುಗಳಿಗಷ್ಟೇ ಆದ್ಯತೆ ನೀಡದೆ ಜನರ ಅಗತ್ಯಗಳಾದ ಆರೋಗ್ಯ, ಶಿಕ್ಷಣ, ಚೆಕ್‌ಡ್ಯಾಂ, ಕೆರೆಕಟ್ಟೆಗಳ ನಿರ್ಮಾಣಕ್ಕೆ ಅಗತ್ಯವಾದ ಒತ್ತು ನೀಡಿದ್ದೇನೆ. ಪರಿಣಾಮವಾಗಿ ಗಂಗಸಮುದ್ರ ಬಳಿ ದೊಡ್ಡದಾದ ಚೆಕ್ಡ್ಯಾಂ ಕಟ್ಟಿಸಿದ್ದೇನೆ. ತಾಲ್ಲೂಕಿನಾದ್ಯಂತ ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ನಿರ್ಮಿಸಿದ್ದೇನೆ. ಎರಡು ತಿಂಗಳೊಳಗೆ ತಾಲ್ಲೂಕಿನಲ್ಲಿರುವ 37 ಕೆರೆಗಳಿಗೆ ನೀರು ತುಂಬಿಸುತ್ತೇನೆ. ಇನ್ನು ಎರಡುವರೆ ವರ್ಷಗಳ ಅಧಿಕಾರವಿದೆ. ಎಲ್ಲೆಲ್ಲಿ ಏನು ಅಭಿವೃದ್ದಿ ಕೆಲಸ ಮಾಡಬೇಕೆಂಬ ಆಲೋಚನೆ ಮಾಡುತ್ತಿದ್ದೇನೆ. ಎಂ.ಎಂ.ಸರ್ಕಾರಿ ಪ್ರೌಢಶಾಲೆಯನ್ನು ಕೆಡವಿ 46 ರೂಂಗಳನ್ನು ಕಟ್ಟಿಸಿದ ಪರಿಣಾಮ 1650 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 50 ನುರಿತ ಶಿಕ್ಷಕರುಗಳಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ತೊಂದರೆಯಾಗಬಾರದೆಂದು ಉಚಿತ ಬಸ್‍ಗಳನ್ನು ಬಿಟ್ಟು ಡ್ರೈವರ್, ಕಂಡಕ್ಟರ್‍ಗೆ ಸಂಬಳ ನೀಡಿ ಡೀಸೆಲ್ ಕೂಡ ಹಾಕಿಸುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಪುಣ್ಯಸಾರ್ಥಕ ಕೆಲಸ ಮಾಡಿಲ್ಲ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶಣ್ಣ, ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ಕುಮಾರಣ್ಣ, ಮಲ್ಲಿಕಾರ್ಜುನ್, ನುಲೇನೂರು ಶೇಖರ್, ಷಣ್ಮುಖಪ್ಪ, ದೇವರಮನೆ ಶೇಖರಪ್ಪ, ಕುಬೇರಪ್ಪ, ಹಳ್ಳಪ್ಪ, ಜಗದೀಶ್, ಗೋವಿಂದಪ್ಪ, ಶಿವಕುಮಾರ್, ಗುತ್ತಿಗೆದಾರ ಹೆಚ್.ಜಗದೀಶ್ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.