ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜಕಾರಣಿಯೆಂದರೆ ಅಟಲ್ ಜೀ ಯವರಂತೆ ಇರಬೇಕು. ಯಾರನ್ನೂ ಎಂದಿಗೂ ಸಹ ವಿನಾಕಾರಣ ಟೀಕಿಸದೆ ಮನಸ್ಸನ್ನು ನೋಯಿಸದೆ ರಾಜಕಾರಣದ ಉತ್ತಂಗಕ್ಕೇರಿದ ಮೇರು ಪರ್ವತ ಅಟಲ್ ಬಿಹಾರಿ ವಾಜಪೇಯಿ ಎಂದು ಚಿಕ್ಕಬಳ್ಳಾಪುರ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ ಹೇಳಿದರು.ನಗರದ ಎಂಟನೇ ವಾರ್ಡ್ನಲ್ಲಿ ಬುಧವಾರ ಲಯನ್ಸ್ ಕ್ಲಬ್ ವತಿಯಿಂದ ನಡೆದ ಅಟಲ್ ಬಿಹಾರಿ ವಾಜಪೇಯಿಯವರ 100ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ವಾರ್ಡ್ ನ ಪೌರ ಕಾರ್ಮಿಕರಿಗೆ ನಾಗರಿಕ ಸನ್ಮಾನ ಮಾಡಿ ಮಾತನಾಡಿ, ತನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಯಶಸ್ವಿಯಾಗಬೇಕೆಂದರೆ ಅಭಿವೃದ್ಧಿ ಕೆಲಸಗಳಿಂದ ಮಾತ್ರ ಸಾಧ್ಯ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣಾ ಅಭಿಯಾನದ ಮೂಲಕ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿ ವಿಶ್ವ ಭೂಪಟದಲ್ಲಿ ಭಾರತವನ್ನು ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯವರ ಸರಳತೆಯನ್ನು ಅಳವಡಿಸಿಕೊಂಡು ಇಂದಿನ ಪೀಳಿಗೆ ಮುನ್ನಡೆಯಬೇಕು ಎಂದು ಹೇಳಿದರು.
ಲಯನ್ ಎನ್.ಬ್ರಹ್ಮಚಾರಿ ಮಾತನಾಡಿ, ನಗರದ ಜನರು ಬೆಚ್ಚನೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಜನರು ಕಣ್ಣುಬಿಡುವ ಮುನ್ನ ತಮ್ಮ ಕೆಲಸ ಮುಗಿಸುವ ತರಾತುರಿಯಲ್ಲಿರುತ್ತಾರೆ. ಅಂತಹ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಸುವ ದೇವತೆಗಳು. ಪೌರ ಕಾರ್ಮಿಕರು ನಗರದದ ಜೀವನಾಡಿಗಳಾಗಿದ್ದಾರೆ. ಅಂತಹ ಸೇವಾ ನಿರತ ಪೌರ ಕಾರ್ಮಿಕರನ್ನು ನಮ್ಮ ಎಂಟನೇ ವಾರ್ಡ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 100ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಸನ್ಮಾನ ಮಾಡುತ್ತಿರುವುದು ನಮ್ಮ ಲಯನ್ಸ್ ಕ್ಲಬ್ ನ ಹೆಮ್ಮೆಯಾಗಿದೆ ಎಂದರು.ಪೌರ ಕಾರ್ಮಿಕರ ಜೊತೆಗೆ ನಾಗರಿಕರಾದ ನಾವು ಸಹಕರಿಸಿದಾಗ ಮಾತ್ರ ಸ್ವಚ್ಛ ನಗರ ನಿರ್ಮಾಣ ಸಾಧ್ಯವಿದ್ದು, ನಮ್ಮ ಕಸವನ್ನು ನಾವೇ ನಿರ್ವಹಿಸುವಂಥ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಾಗರಿಕರ ಜವಾಬ್ದಾರಿ ಹೆಚ್ಚಾಗಿದ್ದು, ತಮ್ಮ ಕಸಗಳನ್ನು ತಾವೇ ವಿಲೇವಾರಿ ಮಾಡುವುದರೊಂದಿಗೆ ರಸ್ತೆಗಳಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು ಎಂದರು.
ನಾವಿಂದು ಸ್ವಚ್ಛವಾಗಿ ಉಸಿರಾಡುವುದಕ್ಕೆ ಪೌರಕಾರ್ಮಿಕರೇ ಕಾರಣವಾಗಿದ್ದಾರೆ. ಪೌರ ಕಾರ್ಮಿಕರು ಮುಂಜಾನೆ ಎದ್ದು ಮೇಣದ ಬತ್ತಿಯಂತೆ ತಮ್ಮನ್ನು ಉರಿಸಿಕೊಂಡು ಊರಿನ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಪೌರ ಕಾರ್ಮಿಕರು ದುಶ್ಚಟ, ದುರಭ್ಯಾಸಗಳಿಂದ ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಲಯನ್ಸ್ ಕ್ಲಬ್ ಖಜಾಂಚಿ ಸೂರ್ಯನಾರಾಯಣ ಶೆಟ್ಟಿ ಮಾತನಾಡಿ, ಪೌರ ಕಾರ್ಮಿಕರು ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಪೌರ ಕಾರ್ಮಿಕರು ತಮ್ಮ ಅರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಅದೇ ರೀತಿ ಕುಟುಂಬದ ಉಳಿದ ಸದಸ್ಯರ ಆರೋಗ್ಯದ ಕುರಿತೂ ಕಾಳಜಿ ವಹಿಸಬೇಕು .ಪೌರಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಿ ದುಡಿಯಬೇಕೆಂದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಮುಂದೆ ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಉನ್ನತ ಹುದ್ದೆ ಹೊಂದುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋವಿಂದಪ್ಪ, ಸದಸ್ಯರಾದ ವೆಂಕಟೇಶ್. ಆರ್. ಸುಬ್ಬಲಕ್ಷ್ಮೀ, ಸಿ. ಬಿ .ಕಿರಣ್, ಪೌರಕಾರ್ಮಿಕರು,ಮತ್ತಿತರರು ಇದ್ದರು.