ಗಡಿಭಾಗದ ಮತದಾರರು ಕಾಂಗ್ರೆಸ್ ಬೆಂಬಲಿಸಲು ಅನಪೂರ ಮನವಿ

| Published : Apr 21 2024, 02:17 AM IST

ಗಡಿಭಾಗದ ಮತದಾರರು ಕಾಂಗ್ರೆಸ್ ಬೆಂಬಲಿಸಲು ಅನಪೂರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಅದರಂತೆ ಲೋಕಸಭಾ ಚುನಾವಣೆಗೆ ಕೂಡ ಪಕ್ಷ ಹಲವಾರು ಗ್ಯಾರಂಟಿ ಘೋಷಣೆ ಮಾಡಿ, ಮತದಾರರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ಪಕ್ಷದ ಕಾರ್ಯಕರ್ತರು ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿರುವ ಗುರುಮಠಕಲ್ ಮತಕ್ಷೇತ್ರದ ಅಭಿವೃದ್ಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಶ್ರಮಿಸಿದ್ದಾರೆ. ಕಾರಣ ಬರುವ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಗಾಗಿ ಮತದಾರರು ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ಮನವಿ ಮಾಡಿದರು.

ಗುರುಮಠಕಲ್ ಮತಕ್ಷೇತ್ರದ ನಸಲವಾಯಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ನಮಗೆ ಮಹತ್ವದಾಗಿದೆ. ಪಕ್ಷದ ಅಭ್ಯರ್ಥಿಯಾಗಿರುವ ದೊಡ್ಡಮನಿ ಸರಳ, ಅಭಿವೃದ್ಧಿಪರ ಚಿಂತನೆ ಹೊಂದುವ ಜೊತೆಗೆ ಈ ಭಾಗದ ಜನರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರನ್ನು ಗೆಲ್ಲಿಸಿದರೆ ಕಾರ್ಯಕರ್ತರ ಹಾಗೂ ಮತದಾರರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಉಮೇಶ ಜಾದವ ಕಲಬುರಗಿ ಸಂಸದರಾಗಿ 5 ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರಕ್ಕೆ ಬಂದಿರುವುದೇ ಅಪರೂಪ. ಅವರ ಕೊಡುಗೆ ಏನು ಇಲ್ಲ, ಸುಳ್ಳು ಭರವಸೆ ನೀಡಿ, ಪ್ರಧಾನಿ ಮೋದಿ ಹೆಸರಲ್ಲಿ ಮತ ಪಡೆಯಲು ಯತ್ನಿಸುತ್ತಾರೆ. ಅವರು ಪ್ರಚಾರಕ್ಕೆ ಬಂದರೆ, ಜನರು ತಮ್ಮ ತಮ್ಮ ಗ್ರಾಮಗಳಿಗೆ ಏನು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಬೇಕು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಅದರಂತೆ ಲೋಕಸಭಾ ಚುನಾವಣೆಗೆ ಕೂಡ ಪಕ್ಷ ಹಲವಾರು ಗ್ಯಾರಂಟಿ ಘೋಷಣೆ ಮಾಡಿ, ಮತದಾರರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ಪಕ್ಷದ ಕಾರ್ಯಕರ್ತರು ನೀಡುತ್ತಿದ್ದಾರೆ. ಮತದಾರರು ನಾವು ಮಾಡಿರುವ ಕಾರ್ಯಗಳ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಮತ ನೀಡಿ ಖರ್ಗೆಯವರ ಕೈ ಬಲ ಪಡಿಸಬೇಕು ಎಂದರು.

ನಂತರ ಅವರು ಕಾರ್ಯಕರ್ತರೊಂದಿಗೆ ಕೂಡಿ ಮನೆ ಮನೆಗೆ ತೆರಳಿ ಮತದಾರರಿಗೆ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಮತಯಾಚಿಸಿದರು.

ಗ್ರಾಮದ ರಮೇಶ ಕುಲಕರ್ಣಿ, ಮಹ್ಮದ್ ಗೌಸ್, ಪೋಲಪ್ಪ, ರಘು, ಶಿವು, ಚಂದ್ರು, ಮೌಲಾಲಿ, ಡಿ. ಬಸವರಾಜ, ಅಶೋಕ ಕಲಾಲ್, ನರಸಿಂಹ ಚಟ್ರಿ, ಭೀಮಯ್ಯ, ವೇಣುಗೋಪಾಲರಡ್ಡಿ, ನರಸಿಂಹ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

-------ಗುರುಮಠಕಲ್ ಮತಕ್ಷೇತ್ರದ ನಸಲವಾಯಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.