ನೀರಿದ್ದರೂ ಹರಿಸದ ದರಿದ್ರ ಸರ್ಕಾರ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ

| Published : Mar 27 2024, 01:04 AM IST

ನೀರಿದ್ದರೂ ಹರಿಸದ ದರಿದ್ರ ಸರ್ಕಾರ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ರೈತರು ನೀರು ಹರಿಸಿ ಎಂದರೆ ನೀರಿಲ್ಲ ಎಂದು ಹೇಳುವ ನೀವು, ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ, ಇಲ್ಲಿಯ ರೈತರನ್ನು ಆತ್ಮಹತ್ಯೆ ಕಡೆಗೆ ತಳ್ಳಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ‘ಕೃಷಿ’ ಸಚಿವರಾಗಿ ಒಂದು ಕ್ಷಣವೂ ಇರಬಾರದು. ಕೂಡಲೇ ರಾಜೀನಾಮೆ ನೀಡಬೇಕು. ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಪ್ರಣಾಳಿಕೆ ಹೊರಡಿಸಿದ್ದರೂ ಅದಕ್ಕೆ ಪ್ರತ್ಯುತ್ತರ ನೀಡದೆ ಮೌನ ವಹಿಸಿದ್ದೀರಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಭೀಕರ ಬರಗಾಲದ ನಡುವೆಯೂ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸದೆ ಜನ-ಜಾನುವಾರುಗಳ ನರಕಯಾತನೆ ಅನುಭವಿಸುವಂತೆ ಮಾಡಿರುವ ನೀವು (ಚಲುವರಾಯಸ್ವಾಮಿ) ಕೃಷಿ ಸಚಿವರಾಗಿರಲು ಯೋಗ್ಯರಲ್ಲ. ಕೂಡಲೇ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಿರಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.

ಮಳೆ ಕೊರತೆಯಿಂದ ಜಿಲ್ಲೆಯೊಳಗೆ ಕೆರೆ-ಕಟ್ಟೆಗಳೆಲ್ಲಾ ಬರಿದಾಗಿವೆ. ನಾಲೆಗಳಲ್ಲಿ ನೀರು ನಿಲ್ಲಿಸಿ ಮೂರು ತಿಂಗಳಾಗಿದೆ. ಕಬ್ಬು, ಭತ್ತ, ತೆಂಗು, ಅಡಕೆ ಸೇರಿದಂತೆ ಇತರೆ ಬೆಳೆಗಳೆಲ್ಲಾ ಒಣಗಿಹೋಗಿವೆ. ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಇದೇರೀತಿ ಮುಂದುವರೆದರೆ ರೈತರು ಆತ್ಮಹತ್ಯೆಯ ಹಾದಿ ಹಿಡಿಯಲಿದ್ದಾರೆ. ಆದರೂ ಈ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಚುನಾವಣಾ ಸಮಾವೇಶ ನಡೆಸುತ್ತಾ ದುರಾಡಳಿತ ನಡೆಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು

ರೈತ ವಿರೋಧಿ ನಿಲುವು:

ಕೆಆರ್‌ಎಸ್‌ನಲ್ಲಿ ೮೬.೫೦ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ೧೩ ಟಿಎಂಸಿಗೂ ಹೆಚ್ಚು ನೀರಿದೆ. ವಿಶ್ವೇಶ್ವರಯ್ಯ ನಾಲೆ, ವಿರಿಜಾ, ಮಾಧವಮಂತ್ರಿ ಸೇರಿದಂತೆ ಇತರೆ ನಾಲೆಗಳಿಗೆ ನೀರು ಹರಿಸಲು ಕೇವಲ ೨ ಟಿಎಂಸಿಯಷ್ಟು ನೀರು ಸಾಕು. ೭೪ ಅಡಿ ಮೇಲ್ಪಟ್ಟು ನೀರಿದ್ದರೆ ಕೃಷಿ ಚಟುವಟಿಕೆಗೆ ಬಳಸಬಹುದು ಎಂಬ ಕಾನೂನು ಇದೆ. ಆ ಪ್ರಕಾರ ಬೆಳೆಗಳಿಗೆ ನೀರು ಹರಿಸಿ ರಕ್ಷಣೆ ಮಾಡುವುದಕ್ಕೆ ಅವಕಾಶವಿದ್ದರೂ ಸರ್ಕಾರ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಟೀಕಿಸಿದರು.

ಪ್ರಸ್ತುತ ಕನಿಷ್ಠ ೫ ದಿನವಾದರೂ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸುವ ಮೂಲಕ ಜನ-ಜಾನುವಾರುಗಳನ್ನು ರಕ್ಷಣೆ ಮಾಡಬೇಕು. ಕೃಷಿ ನಂತರದಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು ನೀರಿಲ್ಲದ ಕಾರಣ ಮೇವು ಸಹ ಬೆಳೆಯಲು ಆಗುತ್ತಿಲ್ಲ. ಇದರಿಂದಾಗಿ ಹೈನುಗಾರಿಕೆ ಮೇಲೆ ತೀವ್ರ ಹೊಡೆತ ಬಿದ್ದಿದೆ. ನೀವು ಜಾನುವಾರುಗಳನ್ನು ಸಾಕಿದ್ದರೆ ಅದರ ಕಷ್ಟ ಏನೆಂದು ಗೊತ್ತಾಗುತ್ತಿತ್ತು. ನಿಮಗೆ ಇದಾವುದರ ಅರಿವಿಲ್ಲದ ಕಾರಣ ನೀರು ಹರಿಸುತ್ತಿಲ್ಲ ಎಂದು ಚುಚ್ಚಿ ನುಡಿದರು.

ಯಾವ ಮುಖ ಹೊತ್ತು ಮತ ಕೇಳುವಿರಿ?

ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಪ್ರಣಾಳಿಕೆ ಹೊರಡಿಸಿದ್ದರೂ ಅದಕ್ಕೆ ಪ್ರತ್ಯುತ್ತರ ನೀಡದೆ ಮೌನ ವಹಿಸಿದ್ದೀರಿ. ನಾಲೆಗಳಿಗೆ ನೀರು ಬಿಡದ ನೀವು ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತೀರಿ? ತಾವು ಮಾಡಿರುವ ತಪ್ಪಿನ ಅರಿವಾದರೆ ಕೂಡಲೇ ರಾಜೀನಾಮೆ ನೀಡಿ ನಂತರ ಜನರ ಬಳಿಗೆ ಹೋಗಿ ಮತ ಕೇಳಿ ಎಂದು ಆಗ್ರಹಿಸಿದರು.

ಕೃಷಿ ಖಾತೆ ನಿಭಾಯಿಸುವಲ್ಲಿ ವಿಫಲ:

ಕೃಷಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಚಲುವರಾಯಸ್ವಾಮಿ ಅವರು ವಿಫಲರಾಗಿದ್ದಾರೆ. ರಾಜಕೀಯ ಮಾಡುವುದಕ್ಕಾಗಿ ಸಚಿವ ಹುದ್ದೆಯಲ್ಲಿದ್ದಾರೆಯೇ ವಿನಃ ರೈತರನ್ನು ರಕ್ಷಿಸುವುದಕ್ಕಲ್ಲ. ಕೃಷಿ ಸಚಿವರಾಗಿ ಮಂಡ್ಯ ಜಿಲ್ಲಗೆ ಹಸಿರು ಹೊದಿಕೆಯನ್ನು ತೊಡಿಸದೆ ಬೆಂಗಾಡಾಗಿ ಮಾಡಿದ್ದೀರಿ. ಕೃಷಿ ಖಾತೆ ವಹಿಸಿಕೊಂಡು ಜಿಲ್ಲೆಗೆ ನೀವು ಕೊಟ್ಟ ಕೊಡುಗೆ ಏನು, ಮಂಡ್ಯ ಜಿಲ್ಲೆಯ ರೈತರ ಹಿತ ಕಾಯದೆ, ತಮಿಳುನಾಡಿನವರ ಹಿತ ಕಾಯಲು ಹೊರಟಿರುವ ನೀವು ಕೃಷಿ ಸಚಿವ ಸ್ಥಾನದಲ್ಲಿರುವುದಕ್ಕೆ ಅನರ್ಹರು ಎಂದು ಛೇಡಿಸಿದರು.

೮ ತಿಂಗಳ ಸಾಧನೆ ಶೂನ್ಯ:

ಕೃಷಿ ಸಚಿವರಾಗಿ ಮಂಡ್ಯ ಜಿಲ್ಲೆಗೆ ಬಹಳ ಅನ್ಯಾಯ ಮಾಡಿ, ಬರ ಪರಿಸ್ಥಿತಿ ತಂದೊಡ್ಡಿದ್ದೀರಿ. ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮೇಲೆ ಸಭೆ ಮಾಡುತ್ತಿರುವ ನೀವು ಒಂದು ದಿನವಾದರೂ ರೈತರ ಕಷ್ಟಗಳನ್ನು ಆಲಿಸಿದ್ದೀರಾ? ರೈತರ ಸಂಕಷಕ್ಟಕ್ಕಿಂತಲೂ ನಿಮಗೆ ಕಾಂಗ್ರೆಸ್ ಪಕ್ಷದ ಸಭೆಯೇ ಮುಖ್ಯವಾಯಿತೇ? ೮ ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು? ೨೦ ರೂ. ಇದ್ದ ಸ್ಟಾಂಪ್ ಕಾಗದವನ್ನು ೧೨೦ ರು., ೧೫೦ ರು. ಮಾಡಿದ್ದೀರಿ, ಉಚಿತ ವಿದ್ಯುತ್ ನೆಪದಲ್ಲಿ ವಿದ್ಯುತ್ ಬಿಲ್ಲನ್ನು ದುಪ್ಪಟ್ಟು ಮಾಡಿದ್ದೀರಿ, ಶಕ್ತಿ ಯೋಜನೆಯಡಿ ಉಚಿತ ಬಸ್ ನೀಡುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಿಗದಂತೆ ಮಾಡಿದ್ದೀರಿ, ಪುರುಷರು ಬಸ್‌ಗಳಲ್ಲಿ ಹೋಗಲಾಗುತ್ತಿಲ್ಲ. ಇದು ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಸಮಾವೇಶಕ್ಕೆ ೯ ಕೋಟಿ ವ್ಯಯ:

ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮಂಡ್ಯ ನಗರದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರುವುದು ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಡೆದ ಗ್ಯಾರಂಟಿ ಸಮಾವೇಶಕ್ಕೆ ಒಂದೇ ತಿಂಗಳಲ್ಲಿ ೯ ಕೋಟಿ ರೂ. ಖರ್ಚು ಮಾಡಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದ್ದಾರೆ.

ಇವರು ಸಮಾವೇಶ ನಡೆಸಲು ಸರ್ಕಾರದ ಹಣವೇ ಬೇಕಿತ್ತೇ? ಕೇವಲ ಒಂದು ತಿಂಗಳಲ್ಲೇ ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳಿಗೆ ೯ ಕೋಟಿ ಖರ್ಚು ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ರವೀಂದ್ರ ಪ್ರಶ್ನಿಸಿದರು.

‘ನಮ್ಮ ನೀರು ತ.ನಾಡಿನ ಹಕ್ಕು’

ಅಕಾರಕ್ಕೆ ಬರುವ ಮುನ್ನ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷವಾಕ್ಯದಡಿ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ ನೀವು ಇಲ್ಲಿಯ ಜನ, ರೈತರನ್ನು ಬಲಿಕೊಟ್ಟು ತಮಿಳುನಾಡಿನವರು ನೀರು ಕೇಳುವ ಮುಂಚೆಯೇ ನೀರು ಹರಿಸಿದಿರಿ. ಅಧಿಕಾರಕ್ಕೆ ಸಿಕ್ಕ ಕೂಡಲೇ ‘ನಮ್ಮ ನೀರು ನಮ್ಮ ಹಕ್ಕು’ ಎಂಬುದನ್ನು ಮರೆತು ‘ನಮ್ಮ ನೀರು ತಮಿಳುನಾಡಿನ ಹಕ್ಕು’ ಎಂಬಂತಾಗಿದೆ.

ನಮ್ಮ ರೈತರು ನೀರು ಹರಿಸಿ ಎಂದರೆ ನೀರಿಲ್ಲ ಎಂದು ಹೇಳುವ ನೀವು, ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ, ಇಲ್ಲಿಯ ರೈತರನ್ನು ಆತ್ಮಹತ್ಯೆ ಕಡೆಗೆ ತಳ್ಳಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ‘ಕೃಷಿ’ ಸಚಿವರಾಗಿ ಒಂದು ಕ್ಷಣವೂ ಇರಬಾರದು. ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಶ್ರೀರಂಗಪಟ್ಟಣ ತಾಲೂಕು ಜಾ.ದಳ ಕಾರ್ಯಾಧ್ಯಕ್ಷ ತಗ್ಗಹಳ್ಳಿ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ ಹಾಜರಿದ್ದರು.