ಸಾಮಾಜಿಕ ಜಾಲತಾಣದಂತೆ ಕಾರ್ಯನಿರ್ವಹಿಸುವ ಅಂಚೆ ಇಲಾಖೆ
KannadaprabhaNewsNetwork | Published : Oct 11 2023, 12:45 AM IST
ಸಾಮಾಜಿಕ ಜಾಲತಾಣದಂತೆ ಕಾರ್ಯನಿರ್ವಹಿಸುವ ಅಂಚೆ ಇಲಾಖೆ
ಸಾರಾಂಶ
ಸಾಮಾಜಿಕ ಜಾಲತಾಣದಂತೆ ಕಾರ್ಯನಿರ್ವಹಿಸುವ ಅಂಚೆ ಇಲಾಖೆ
ಅಂಚೆ ಜನಸಂಪರ್ಕ ಸಭೆಯಲ್ಲಿ ಎಲ್.ಕೆ.ದಾಸ್ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿರುವ ಅಂಚೆ ಇಲಾಖೆ ಸಾಮಾಜಿಕ ಜಾಲತಾಣದಂತೆ ಜನರ ನಡುವೆ ಸಂಪರ್ಕ ಸಾಧಿಸುತ್ತಿದೆ ಎಂದು ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಷ್ ಹೇಳಿದರು. ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಚಿಕ್ಕಮಗಳೂರು ಅಂಚೆ ವಿಭಾಗ ಮಂಗಳವಾರ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿ, ಭಾರತ ಹಳ್ಳಿಗಳ ದೇಶ. 30 ಸಾವಿರ ಗ್ರಾಮಗಳಲ್ಲಿ ಅಂಚೆ ಇಲಾಖೆ ತನ್ನ ಕಚೇರಿ ಹೊಂದಿದೆ. ಇಲಾಖೆ ವಿವಿಧ ಯೋಜನೆಗಳಡಿ ಹಣ ಉಳಿತಾಯ ಮಾಡಬಹುದಾಗಿದ್ದು, ಸುಭದ್ರ ಜೀವನಕ್ಕೆ ಉಳಿತಾಯದ ಹಣ ಸಹಕಾರಿಯಾಗಲಿದೆ. ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾಗಿದ್ದು, ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸಂಪೂರ್ಣ ಗ್ಯಾರಂಟಿ ದೊರೆಯಲಿದೆ ಎಂದರು. ದೇಶದಲ್ಲಿ ವಿವಿಧ ಖಾತೆಗಳಿಗೆ ಹೆಚ್ಚು ಬಡ್ಡಿ ನೀಡುತ್ತಿರುವುದು ಕೇವಲ ಅಂಚೆ ಇಲಾಖೆ ಮಾತ್ರ. ಬೇರೆಲ್ಲೂ ಇಷ್ಟು ಬಡ್ಡಿ ದೊರೆಯುವುದಿಲ್ಲ. ಪ್ರಧಾನಮಂತ್ರಿಗಳ ಆಶಯದಂತೆ ಅಂಚೆ ಇಲಾಖೆ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿ, ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದೆ. ಅಂಚೆ ಇಲಾಖೆಯಲ್ಲಿ ನೂರಾರು ಯೋಜನೆಗಳಿದ್ದು, ಕಡಿಮೆ ಮೊತ್ತದ ಜೀವವಿಮೆ ಪ್ರೀಮಿಯಮ್‌ಗೆ ಹೆಚ್ಚು ಬೋನಸ್ ನೀಡುತ್ತಿದೆ. ದೇಶದ ಯಾವುದೇ ಗ್ರಾಮೀಣ ಭಾಗಗಳಿಂದ ವಿದೇಶದ ಮೂಲೆ ಮೂಲೆಗೂ ಪತ್ರ, ಪಾರ್ಸೆಲ್‌ಗಳನ್ನು ತಲುಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಮಾತನಾಡಿ, ರಾಜ, ಮಹಾರಾಜರ ಕಾಲದಲ್ಲಿ ಪಾರಿವಾಳಗಳ ಮೂಲಕ ಪತ್ರ ವ್ಯವಹಾರ ಮಾಡಲಾಗುತಿತ್ತು. ನಂತರದ ದಿನಗಳಲ್ಲಿ ಬ್ರಿಟೀಷರ ಆಡಳಿತದಲ್ಲಿ ಅಂಚೆ ಇಲಾಖೆ ಆರಂಭಿಸಲಾಯಿತು. ಹಿಂದೆ ಪತ್ರ ವ್ಯವಹಾರಗಳು ಇದ್ದಾಗ ಕುಟುಂಬಗಳು, ಸಂಬಂಧಗಳ ನಡುವೆ ಬಾಂಧವ್ಯವಿತ್ತು. ಆದರೆ ಇಂದು ಆಧುನಿಕ ಯುಗದಲ್ಲಿ ಮೊಬೈಲ್ ಬಂದು ಬಾಂಧವ್ಯ ಕಡಿಮೆಯಾಗಿದೆ. ಈ ಹಿಂದೆ ಟೆಲಿಗ್ರಾಮ್‌ಗಳ ಮೂಲಕ ತುರ್ತು ಸಂದೇಶ ಕಳುಹಿಸುತ್ತಿದ್ದರು ಎಂದರು. ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಎನ್.ರಮೇಶ್ ಮಾತನಾಡಿ, 165 ವರ್ಷಗಳ ಇತಿಹಾಸವಿರುವ ಅಂಚೆ ಇಲಾಖೆ ಕಾಲಕ್ಕೆ ಅನುಗುಣವಾಗಿ ಬದಲಾವಣೆಗೊಂಡಿದ್ದು, ಹೊಸ ತಂತ್ರಜ್ಞಾನ ದೊಂದಿಗೆ ವಿನೂತನ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ವಿವಿಧ ಜನಪಯೋಗಿ ಸೇವೆ ಒದಗಿಸುತ್ತಿದೆ. ವಿದೇಶಗಳಿಗೆ ಪತ್ರ, ಪಾರ್ಸೆಲ್ ಕಳುಹಿಸಲು ಡಾಕ್ ನಿರ್ಯಾಕರ್ ಎಂಬ ಹೊಸ ಸೇವೆ ಆರಂಭಿಸಿದೆ. ಮಹಿಳೆಯರು, ಹೆಣ್ಣುಮಕ್ಕಳಿಗೆ ಸುರಕ್ಷಿತ, ಲಾಭದಾಯಕ ಯೋಜನೆ ನೀಡಿದೆ. ಜಿಲ್ಲೆಯಲ್ಲಿ ಡಿಬಿಟಿ ಯೋಜನೆಗೆ ಶೇ.87 ಆಧಾರ್ ಸೀಡಿಂಗ್ ಪೂರೈಸಿದೆ. ಬ್ಯಾಂಕಿಂಗ್, ಜೀವವಿಮೆ, ಸವರನ್ ಗೋಲ್ಡ್ ಬಾಂಡ್ ವಿತರಣೆ ಮಾಡಲಿದೆ. ಅಂಚೆ ಇಲಾಖೆ ದೇಶದ ಅಭಿವೃದ್ಧಿಗೆ ಬದ್ಧವಾಗಿದ್ದು, ಯಶಸ್ವಿ ಗ್ರಾಹಕರು ಅಂಚೆ ಇಲಾಖೆ ರಾಯಬಾರಿಗಳಾಗಿದ್ದಾರೆ ಎಂದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ನಾಡಕಚೇರಿ ಉಪ ತಹಸೀಲ್ದಾರ್ ಕೆ.ಎನ್. ನಾಗೇಂದ್ರ, ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಅಂಚೆ ಇಲಾಖೆ ಐಪಿಪಿಬಿ ವ್ಯವಸ್ಥಾಪಕ ಪ್ರವೀಣ್, ಎಸ್.ಎನ್.ಪ್ರದೀಪ್, ಅನುಷ, ಗಂಗಾಧರ, ರಂಗಪ್ಪ, ಕುಮಾರ್, ಗೀತಾ ಮತ್ತಿತರರು ಇದ್ದರು. --ಬಾಕ್ಸ್ ---- ಕೇಂದ್ರ, ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಾಯಿತ ವಿವಿಧ ಯೋಜನೆಗಳಲ್ಲಿ ಸರ್ಕಾರದಿಂದ ವಿಧವಾ ವೇತನ, ಸಹಾಯಧನ ಮುಂತಾದ ಹಣ ಪಡೆಯಲು ಆಧಾರ್ ಸಂಖ್ಯೆಯನ್ನು ಎನ್.ಪಿ.ಸಿ.ಐ ಮೂಲಕ ಮ್ಯಾಪಿಂಗ್ ಮಾಡಿ ಜೋಡಣೆ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ರೈತರು, ವಿವಿಧ ಯೋಜನೆಗಳ ಫಲಾನುಭವಿಗಳು ಸರ್ಕಾರದಿಂದ ಹಣ ಪಡೆಯಲು ಅ.20 ರೊಳಗೆ ತಾವು ಖಾತೆ ಹೊಂದಿರುವ ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಎನ್.ಪಿ.ಸಿ.ಐ ಮಾಡಿಸಿ ಸ್ವೀಕೃತಿ ಯನ್ನು ಕಡ್ಡಾಯವಾಗಿ ಸ್ಥಳೀಯ ನಾಡಕಚೇರಿಗೆ ನೀಡಬೇಕು. ಎನ್.ಪಿ.ಸಿ.ಐ ಮಾಡಿಸದಿದ್ದಲ್ಲಿ ಅಂತಹ ಖಾತೆಗಳಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಲ್ಲ. ತನುಜಾ ಟಿ.ಸವದತ್ತಿ, ಎನ್.ಆರ್.ಪುರ ತಹಸೀಲ್ದಾರ್. ೧೦ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ಅಂಚೆ ಇಲಾಖೆ ಚಿಕ್ಕಮಗಳೂರು ಉಪ ವಿಭಾಗದಿಂದ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನವನ್ನು ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟ.ಸವದತ್ತಿ ಉದ್ಘಾಟಿಸಿದರು. ಎಲ್.ಕೆ.ದಾಷ್, ರಮೇಶ್, ಸದಾಶಿವ ಆಚಾರ್ಯ, ನಾಗೇಂದ್ರ, ಸುರೇಂದ್ರ, ಪ್ರವೀಣ್ ಇದ್ದರು.