ಗರ್ಭಿಣಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

| Published : Jun 20 2025, 12:34 AM IST / Updated: Jun 20 2025, 12:35 AM IST

ಸಾರಾಂಶ

ಗಂಡ ಹಾಗೂ ಗರ್ಭಿಣಿ ಹೆಂಡತಿಯ ನಡುವೆ ಕ್ಷುಲ್ಲಕ ವಿಚಾರದಲ್ಲಿ ನಡೆದ ಜಗಳ ಇಬ್ಬರ ಸಾವಿನಲ್ಲಿ ದಾರುಣ ಅಂತ್ಯ ಕಂಡ ಘಟನೆ ತಾಲೂಕಿನ ನಾವೂರು ಗ್ರಾಮದ ಬಡಗುಂಡಿಯ ಕೀಲ್ತೋಡಿ ಎಂಬಲ್ಲಿ ನಡೆದಿದೆ.

ಕ್ಷುಲ್ಲಕ ವಿಚಾರದ ಜಗಳಕ್ಕೆ ದಾರುಣ ಅಂತ್ಯ । ಬಂಟ್ವಾಳ ತಾಲೂಕು ಬಡಗುಂಡಿಯಲ್ಲಿ ಹೃದಯವಿದ್ರಾವಕ ಘಟನೆಕನ್ನಡಪ್ರಭ ವಾರ್ತೆ ಬಂಟ್ವಾಳಗಂಡ ಹಾಗೂ ಗರ್ಭಿಣಿ ಹೆಂಡತಿಯ ನಡುವೆ ಕ್ಷುಲ್ಲಕ ವಿಚಾರದಲ್ಲಿ ನಡೆದ ಜಗಳ ಇಬ್ಬರ ಸಾವಿನಲ್ಲಿ ದಾರುಣ ಅಂತ್ಯ ಕಂಡ ಘಟನೆ ತಾಲೂಕಿನ ನಾವೂರು ಗ್ರಾಮದ ಬಡಗುಂಡಿಯ ಕೀಲ್ತೋಡಿ ಎಂಬಲ್ಲಿ ನಡೆದಿದೆ.

ಮೂಲತಃ ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ಬಡಗುಂಡಿಯಲ್ಲಿ ವಾಸ್ಯವ್ಯವಿದ್ದ ತಿಮ್ಮಪ್ಪ ರಾಮ ಮೂಲ್ಯ (52) ಹಾಗೂ ಅವರ ಪತ್ನಿ ಜಯಂತಿ (45) ಮೃತರು. ಪ್ರತಿದಿನ ಇವರ ಮನೆ ಮುಂಭಾಗದಿಂದಲೇ ಹಾಲಿನ ಡೈರಿಗೆ ಹಾಲುಕೊಂಡು ಹೋಗುವ ಸ್ಥಳೀಯ ಮಹಿಳೆಯೊಬ್ಬರು, ಜಯಂತಿ ಅವರನ್ನು ಕರೆದಾಗ ಅವರು ಹೊರ ಬಂದಿರಲಿಲ್ಲ. ಬಾಗಿಲು ತೆರೆದುಕೊಂಡಿದ್ದ ಹಿನ್ನೆಲೆಯಲ್ಲಿ ವಾಪಾಸು ಬರುವ ವೇಳೆ ಮನೆಯೊಳಗೆ ಹೋಗಿ ನೋಡುವಾಗ ಜಯಂತಿ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದರೆ ತಿಮ್ಮಪ್ಪ ಅವರು ಅಡುಗೆ ಮನೆಯ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿತ್ತು. ತಕ್ಷಣ ಅವರು, ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪತಿಯಿಂದಲೇ ಕೃತ್ಯ:ತುಂಬು ಗರ್ಭಿಣಿ ಜಯಂತಿಯನ್ನು ಪತಿ ತಿಮ್ಮಪ್ಪ ಮೂಲ್ಯ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಜಯಂತಿ ಮೃತದೇಹದ ಮೇಲಿದ್ದ ಗಾಯದ ಗುರುತುಗಳು ಇದಕ್ಕೆ ಪುಷ್ಟಿ ನೀಡಿದೆ.ಬುಧವಾರ ರಾತ್ರಿ 11 ಗಂಟೆಯವರೆಗೂ ಪತಿ ಪತ್ನಿಯರಿಬ್ಬರೂ ಎಚ್ಚರದಲ್ಲಿದ್ದು, ಸ್ಥಳೀಯ ಕೆಲವರು ಗಮನಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ 16 ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿದ್ದು ಮಕ್ಕಳಾಗಿರಲಿಲ್ಲ. ಜಯಂತಿ ಇದೀಗ ಗರ್ಭಿಣಿಯಾಗಿದ್ದು, ಜು.2 ರಂದು ಸೀಮಂತ ದಿನವೂ ನಿಗದಿಯಾಗಿತ್ತು. ಟೈಲರ್ ವೃತ್ತಿ ಮಾಡಿಕೊಂಡಿದ್ದ ತಿಮ್ಮಪ್ಪ ಕೋಳಿ ಅಂಕದ ಚಟ ಹೊಂದಿದ್ದರು. ಇದರಿಂದ ಆರ್ಥಿಕವಾಗಿ ಸಮಸ್ಯೆ ಎದುರಾಗಿ ಟೈಲರ್ ವೃತ್ತಿ ಬಿಟ್ಟಿದ್ದರು. ಬಳಿಕ ಮಿತ್ತಮಜಲು ಎಂಬಲ್ಲಿ ಅಣ್ಣನ ಮನೆಯ ಸಮೀಪ ಅಂಗಡಿ ಹಾಕಿಕೊಟ್ಟಿದ್ದು ವ್ಯಾಪಾರ ಮಾಡುತ್ತಿದ್ದರು. ಇವರ ಮನೆ ಮೂಲಮನೆ ಸಜಿಪಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿದ್ದು, ಬಡಗುಂಡಿಯಲ್ಲಿದ್ದ ಪತ್ನಿ ಜಯಂತಿಯ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದರು. ಸೀಮಂತ ಕಾರ್ಯಕ್ರಮದ ಖರ್ಚುಗಳ ಬಗ್ಗೆ ಚಿಂತೆಯಲ್ಲಿದ್ದ ತಿಮ್ಮಪ್ಪಗೆ ಯಾವುದೇ ಚಿಂತೆ ಮಾಡಬೇಡ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಭರವಸೆಯನ್ನು ನೀಡಿದ್ದೆವು ಎಂದು ಅವರ ಅಣ್ಣ ಹಾಗೂ ತಮ್ಮ‌ ಹೇಳಿ ಕಣ್ಣೀರು ಹಾಕಿದರು.ಜಯಂತಿ ಹಿಂದೊಮ್ಮೆ ಗರ್ಭಿಣಿಯಾಗಿದ್ದಾಗ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿತ್ತು, ಇದೀಗ ಬಹುವರ್ಷಗಳ ಬಳಿಕ ಗರ್ಭ ಧರಿಸಿದ್ದ ಜಯಂತಿ, ಪತಿಯ ನೆರವಿನಿಂದ ಸೀಮಂತಕ್ಕೂ ಸಿದ್ದತೆ ನಡೆಸಿದ್ದರು. ಜಯಂತಿ ಶ್ರೀ ಗೌರಿ ನವೋದಯ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದು. ಸೀಮಂತದ ಕಾರಣಕ್ಕೆ ಗುಂಪಿನಿಂದ ಪಡೆದ 50 ಸಾವಿರ ರು. ಚೆಕ್‌ನ್ನು ಬುಧವಾರ ಬೆಳಗ್ಗೆ 11ರ ಸುಮಾರಿಗೆ ಬಂಟ್ವಾಳದ ಬ್ಯಾಂಕ್‌ ನಿಂದ ಡ್ರಾ ಮಾಡಿದ್ದರು.ಮನೆಗೆ ವಾಪಾಸು ಬರುವಾಗ ಮೀನಿಗೆ ಹೆಚ್ಚು ಕ್ರಯ ಎನ್ನುವ ಕಾರಣಕ್ಕೆ ಕೋಳಿಮಾಂಸವನ್ನು ಮನೆಗೆ ತಂದಿರುವುದನ್ನು ಸ್ಥಳೀಯ ನಿವಾಸಿಗಳಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಮಧ್ಯಾಹ್ನ ಕೋಳಿ ಪದಾರ್ಥ ಊಟ ಮಾಡಿದ್ದ ಇವರು, ಸಂಜೆಯ ವೇಳೆಗೆ ಪತಿಯ ಜೊತೆಗೆ ಮನೆಯ ಜಗಲಿಯಲ್ಲಿ ಕುಳಿತುಕೊಂಡು ಮಾತನಾಡಿಕೊಳ್ಳುತ್ತಿದ್ದುದನ್ನು ಕಂಡವರಿದ್ದಾರೆ. ಆದರೆ ಸೀಮಂತದ ಕನಸು ಹೊತ್ತಿದ್ದ ಜಯಂತಿ ಬದುಕಿನಲ್ಲಿ ಆ ಮೊದಲೇ ವಿಧಿ ಆಟವಾಡಿದ್ದು, ರಾತೋರಾತ್ರಿ ಕ್ಷುಲ್ಲಕ ವಿಚಾರದಲ್ಲಿ ಆರಂಭವಾದ ಜಗಳದಿಂದ ಪತ್ನಿಯ ಕೊಲೆಯಾದರೆ, ತನ್ನ ಕೃತ್ಯದಿಂದ ಬೇಸತ್ತ ಪತಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಕೃತ್ಯಕ್ಕೆ ಏನು ಕಾರಣ ಎನ್ನುವುದು ಇನ್ನೂ ನಿಗೂಢವಾಗಿದ್ದು, ಡ್ರಾ ಮಾಡಿಕೊಂಡು ಬಂದಿದ್ದ ಹಣವೂ ಮನೆಯಲ್ಲಿಯೇ ಇತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.ಬಡಕುಟುಂಬ: ಜಯಂತಿ ಅವರ ತಾಯಿ ಮನೆ ಬಡಗುಂಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿದೆ. ಬಡಕುಟುಂಬವಾಗಿದ್ದು,ಸಣ್ಣ ಹಂಚಿನ ಮನೆಯಲ್ಲಿ ಇವರ ವಾಸ. ಸುತ್ತಮುತ್ತಲೂ ಮನೆಯಿದ್ದು, ಎಲ್ಲರಿಗೆ ಪ್ರೀತಿಯ ಮನೆಯವರಾಗಿದ್ದು, ಅತ್ಯಂತ ಸಾಧು ಸ್ವಭಾವವನ್ನು ಹೊಂದಿದವರು. ಎಲ್ಲರ ಜೊತೆ ಬೆರೆತು ಬಾಳುವ ಇವರು ಅಕ್ಕಪಕ್ಕದಲ್ಲಿ ಕರೆದು ಮಾತನಾಡುವ ಗುಣವುಳ್ಳವರಾಗಿದ್ದರು. ತಂದೆ ತಾಯಿ ಇಬ್ಬರು ವಿಧಿವಶರಾದ ಬಳಿಕ ಸಜೀಪದ ಮಿತ್ತಮಜಲನಿಂದ ಜಯಂತಿ ಅವರು ಸುಮಾರು 7 ವರ್ಷಗಳಿಂದ ಈ ಮನೆಯಲ್ಲಿ ಪತಿ ತಿಮ್ಮಪ್ಪರ ಜೊತೆಗೆ ವಾಸವಾಗಿದ್ದರು.ತುಂಬು ಗರ್ಭೀಣಿ ಮಹಿಳೆಯ ಕೊಲೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಶವ ಮಹಜರು ಪ್ರಕ್ರಿಯೆ ಅಪರಾಹ್ನ ೩ ಗಂಟೆಯವರೆಗೂ ಮುಂದುವರಿದಿತ್ತು. ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಪತ್ನಿ ಹಾಗೂ ಪತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ.ವಿಜಯಪ್ರಸಾದ್, ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಹಾಗೂ ಸಿಬ್ಬಂದಿಗಳು ಬೇಟಿ ನೀಡಿದ್ದಾರೆ. ಜಯಂತಿ ಸಹೋದರಿ ಸುಜಾತ ನೀಡಿದ ದೂರಿನಂತೆ ಹಾಗೂ ತಿಮ್ಮಪ್ಪ ರಾಮ ಮೂಲ್ಯ ಆತ್ಮಹತ್ಯೆಗೆ ಸಂಬಂಧಿಸಿ ಮೃತ ತಿಮ್ಮಪ್ಪ ಅವರ ಅಣ್ಣ ವಿಶ್ವನಾಥರವರ ದೂರಿನಂತೆ ಒಟ್ಟು ಎರಡು ಪ್ರಕರಣ ದಾಖಲಾಗಿದೆ.