ಸಾರಾಂಶ
ಕೊಳ್ಳೇಗಾಲ : ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಮುಂಭಾಗ ಪಿ.ಜಿ. ಪಾಳ್ಯ ಗ್ರಾಮದ ನಮಿತಾ (22) ಎಂಬಾಕೆ ಸಾರಿಗೆ ಬಸ್‌ಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಿಜಿ ಪಾಳ್ಯ ಗ್ರಾಮದ ನಮಿತಾ ಅಜ್ಜಿಪುರದ ಎರಡು ತಿಂಗಳ ಗರ್ಭಿಣಿಯಾಗಿದ್ದು ಕಾಮಗೆರೆ ಖಾಸಗಿ ಹೋಲಿಕ್ರಾಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಬಂದಿದ್ದರು ಎನ್ನಲಾಗಿದೆ. ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆ ಪಡೆದು ತಮ್ಮ ಗ್ರಾಮಕ್ಕೆ ತೆರಳಲು ಹೋಲಿ ಕ್ರಾಸ್ ಆಸ್ಪತ್ರೆ ಮುಂಭಾಗ ರಸ್ತೆ ದಾಟುತ್ತಿದ್ದಾಗ ಮಹಿಳೆಗೆ ವೇಗವಾಗಿ ಬಂದ ಕರ್ನಾಟಕ ರಾಜ್ಯ ಸಾರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ:
ಕರ್ನಾಟಕ ರಾಜ್ಯ ಸಾರಿಗೆ ವಾಹನ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಕಾಮಗೆರೆ ಗ್ರಾಮದಲ್ಲಿ ಬಸ್ ತಡೆದು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥಾಪಕ ಶಂಕರ್ ಆಗಮಿಸಿ ಯುವತಿ ಸಾವಿಗೆ ಪರಿಹಾರದ ಹಣವಾಗಿ 25000 ಅಂತ್ಯ ಸಂಸ್ಕಾರದ ಖರ್ಚು ನೀಡಲಾಗುವುದು.
ನಂತರ ಚಾರ್ಜ್ ಶೀಟ್ ಆದ ಬಳಿಕ 25000 ನೀಡಲಾಗುವುದು ಅನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ ಘಟನೆಗೆ ಬಗ್ಗೆ ತೀವ್ರವಾಗಿ ಖಂಡಿಸಿ ರಸ್ತೆ ತಡೆ ಮಾಡುತ್ತಿದ್ದ ಗ್ರಾಮಸ್ಥರನ್ನು ಪಟ್ಟಣದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಲ್ಲಿ ಯಶಸ್ವಿಯಾದರು. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.