ಸಾರಾಂಶ
ಕೂಡಬೆಟ್ಟು ಶ್ರೀ ಸದಾಶಿವ ದೇವಳದಲ್ಲಿ ನಿತ್ಯ ಪೂಜೆ । ಮಳೆಗಾಲದಲ್ಲಿ ರಭಸವಾಗಿ ಹರಿಯುವ ನೀರು
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಬೆಟ್ಟ ಗುಡ್ಡವನ್ನು ಹತ್ತಿ ದೇವರ ಪೂಜೆ ಮಾಡುವ ಅರ್ಚಕರನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಅರ್ಚಕರು ಹಗ್ಗದ ಸಹಾಯದಿಂದ ತೋಡು ದಾಟಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಸದ್ಯ ದೇವಸ್ಥಾನದ ನಿತ್ಯ ಪೂಜೆಗೆ ಅರ್ಚಕರು ಹಗ್ಗದ ಸಹಾಯದಿಂದ ಹಳ್ಳ ದಾಟುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನ, ನೇತ್ರಾವತಿ ನದಿಯನ್ನು ಸೇರುವ ಶಿವನದಿ ತೋಡು ಇನ್ನೊಂದು ಭಾಗದಲ್ಲಿದೆ. ಈ ದೇಗುಲದ ಪೂಜೆಗೆ ತೋಡು ದಾಟಿಯೇ ಸಾಗಬೇಕು. ಬೇಸಿಗೆಯಲ್ಲಿ ಹಳ್ಳದಲ್ಲಿ ನೀರು ಕಡಿಮೆ ಇರುವುದರಿಂದ ದಾಟುವುದು ಸುಲಭ. ಆದರೆ ಮಳೆಗಾಲದಲ್ಲಿ ಇಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಹಗ್ಗವನ್ನು ಹಿಡಿದೇ ದಾಟಬೇಕು. ಈ ಸಮಯ ಒಂದಿಷ್ಟು ಎಚ್ಚರ ತಪ್ಪಿದರೂ ನೀರು ಪಾಲಾಗುವುದು ಖಚಿತ.ಕಳೆದ 25 ವರ್ಷಗಳಿಂದ ಇಲ್ಲಿ ಪೂಜೆ ನಡೆಸುತ್ತಿರುವ ಮಂಗಳೂರು ತಲಪಾಡಿ ಮೂಲದ ಪ್ರಸ್ತುತ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಸಮೀಪ ವಾಸವಿರುವ 59ರ ಹರೆಯದ ಅರ್ಚಕ ಶ್ರೀಧರ್ ಭಟ್, ಮಳೆಗಾಲದಲ್ಲಿ ಇಲ್ಲಿ ಅಡಕೆ ಮರದ ಕಾಲು ಸಂಕ ನಿರ್ಮಾಣವಾಗುವ ತನಕ ಹಗ್ಗದ ಸಹಾಯದಿಂದಲೇ ಹಳ್ಳವನ್ನು ದಾಟಿ ಪೂಜೆ ನಡೆಸುತ್ತಿದ್ದಾರೆ.ಮಿತ್ತಬಾಗಿಲಿನ ಕೂಡಬೆಟ್ಟು ದೇವಸ್ಥಾನಕ್ಕೆ ತೆರಳಬೇಕಾದರೆ ಮೂರು- ನಾಲ್ಕು ಹಳ್ಳಗಳನ್ನು ದಾಟಬೇಕು. ಇದರಲ್ಲಿ ಎರಡು ಕಡೆ ಇತ್ತೀಚಿನ ವರ್ಷಗಳಲ್ಲಿ ಸೇತುವೆ ನಿರ್ಮಾಣವಾಗಿದೆ. ಆದರೆ ಕೂಡಬೆಟ್ಟು ದೇವಸ್ಥಾನಕ್ಕೆ ತಲುಪಲು ಶಿವನದಿ ಹಳ್ಳಕ್ಕೆ ಸೇತುವೆ ನಿರ್ಮಾಣವಾಗಿಲ್ಲ. ಇದರಿಂದ ಇಲ್ಲಿನ ಅರ್ಚಕರು, ಭಕ್ತರು, ಮಳೆಗಾಲದಲ್ಲಿ ಹಗ್ಗದ ಸಹಾಯದಿಂದಲೇ ಹಳ್ಳ ದಾಟಬೇಕು. ಇಲ್ಲಿ ಮಳೆಗಾಲಕ್ಕೆ ಹಾಕಲಾಗುವ ಕಾಲು ಸಂಕ ಇನ್ನೂ ಕೂಡ ನಿರ್ಮಾಣವಾಗದ ಕಾರಣ ಸದ್ಯ ಒಂದು ಬದಿಯಲ್ಲಿ ಮರದ ಕೊಂಬೆಗೆ, ಇನ್ನೊಂದು ಬದಿಯಲ್ಲಿ ಕಂಬಕ್ಕೆ ಕಟ್ಟಿರುವ ಹಗ್ಗವೇ ಆಸರೆಯಾಗಿದೆ.
ಸ್ವಾತಂತ್ರ್ಯ ದೊರೆತು 75 ವರ್ಷವಾದರೂ ಹಗ್ಗ ಹಿಡಿದು ಹಳ್ಳ ದಾಟಬೇಕಾದ ಸ್ಥಿತಿ ಇರುವುದು ವಿಪರ್ಯಾಸ.----------------
ಎಷ್ಟೇ ನೀರಿದ್ದರೂ ನಿತ್ಯ ಪೂಜೆ ಸಲ್ಲಿಸಲೇಬೇಕಾಗುತ್ತದೆ. ಮಳೆಗಾಲವಾದ್ದರಿಂದ ಸದ್ಯ ಹೆಚ್ಚಿನ ಭಕ್ತರು ಬರುತ್ತಿಲ್ಲ. ನಿತ್ಯವೂ ಹಗ್ಗದ ಮೂಲಕ ಹಳ್ಳ ದಾಟಿ ಬರುವ ತನಕ ಮನೆಯವರಲ್ಲಿ ಆತಂಕ ಇರುತ್ತದೆ. ಸಾಕಷ್ಟು ಅಪಾಯವಿದ್ದರೂ ದೇವರಿಗೆ ಪೂಜೆ ತಪ್ಪಬಾರದು. ಈ ಕಾರಣದಿಂದ ಹಳ್ಳದಲ್ಲಿ ಹೆಚ್ಚಿನ ನೀರಿದ್ದರೂ ಹಗ್ಗದ ಮೂಲಕವೇ ದಾಟಿ ಪೂಜೆ ನಡೆಸುತ್ತೇನೆ। ಶ್ರೀಧರ್ ಭಟ್ ಅರ್ಚಕರು
;Resize=(128,128))
;Resize=(128,128))
;Resize=(128,128))
;Resize=(128,128))