ಓದುಗರ ಸಮಗ್ರ ಮಾಹಿತಿಯ ಪ್ರತೀಕ ಮುದ್ರಣ ಮಾಧ್ಯಮ

| Published : Jul 30 2025, 01:30 AM IST

ಓದುಗರ ಸಮಗ್ರ ಮಾಹಿತಿಯ ಪ್ರತೀಕ ಮುದ್ರಣ ಮಾಧ್ಯಮ
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನ ತಂತ್ರಜ್ಞಾನ ಬೆಳೆದ ಕ್ರಾಂತಿಯ ಯುಗದಲ್ಲಿಯೂ ಮುದ್ರಣ ಮಾಧ್ಯಮ ತನ್ನ ಮೌಲ್ಯ ಕಳೆದುಕೊಳ್ಳದೇ ಓದುಗರ ನಂಬಿಕೆ, ನೈತಿಕತೆ ಮತ್ತು ಸಮಗ್ರ ಮಾಹಿತಿಯ ಪ್ರತೀಕವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ವಿಜ್ಞಾನ ತಂತ್ರಜ್ಞಾನ ಬೆಳೆದ ಕ್ರಾಂತಿಯ ಯುಗದಲ್ಲಿಯೂ ಮುದ್ರಣ ಮಾಧ್ಯಮ ತನ್ನ ಮೌಲ್ಯ ಕಳೆದುಕೊಳ್ಳದೇ ಓದುಗರ ನಂಬಿಕೆ, ನೈತಿಕತೆ ಮತ್ತು ಸಮಗ್ರ ಮಾಹಿತಿಯ ಪ್ರತೀಕವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮುಕ್ತ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಾವ ರಾಜಕಾರಣಿ, ಅಧಿಕಾರಿಗಳನ್ನು ಖುಷಿಪಡಿಸುವ ಸುದ್ದಿಗಳನ್ನು ಮಾತ್ರ ನೀಡದೇ ಅವರು ತಪ್ಪು ಹೆಜ್ಜೆಗಳನ್ನಿಟ್ಟಾಗ ಯಾವುದೇ ಮುಲಾಜಿಲ್ಲದೆ ಈ ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆ ಇದೆ. ನಮ್ಮಂತಹ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದರೇ ಅವರಿಗೆ ಬೆವರಿಳಿಯಬೇಕು. ಬರೆದ ಲೇಖನಗಳಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುವಂತಹ ಚರ್ಚೆಯಾಗಬೇಕು ಎಂದರು. ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪತ್ರಿಕೆಗಳ ಮಹತ್ವ ಮತ್ತು ಅವುಗಳ ಮೌಲ್ಯಗಳ ಬಗ್ಗೆ ಚಿಂತನೆ ನಡೆಸಬೇಕು. ಪತ್ರಕರ್ತರ ಸಮಸ್ಯೆಗಳ ಬಗ್ಗೆಯೂ ಚಿಂತನ, ಮಂತನ ಮಾಡುವುದು ಅಗತ್ಯ ಎಂದರು.

ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶಹಜಹಾನ ಡೊಂಗರಗಾಂವ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಒಂದು ವಾಹನದ 4 ಚಕ್ರಗಳಿದ್ದಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಭದ್ರ ಆಡಳಿತ ನಡೆಯಬೇಕಾದರೇ ಈ 4 ಅಂಗಗಳು ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡುವುದು ಅಗತ್ಯವಾಗಿದೆ ಎಂದರು.ಜಮಖಂಡಿಯ ಪ್ರಾಧ್ಯಾಪಕ ಡಾ.ಯಶವಂತ ವೈ.ಕೊಕ್ಕನವರ ಅವರು ಪತ್ರಿಕೋದ್ಯಮದ ವರ್ತಮಾನದ ಸಮಸ್ಯೆ ಹಾಗೂ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾನಿಪ ಸಂಘದ ಅಧ್ಯಕ್ಷ ಪರಶುರಾಮ ನಂದೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್.ಎಸ್‌.ಎಂ.ಎಸ್ ಕಾಲೇಜನ ಸ್ಥಾನಿಕ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ, ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ, ಸಿಪಿಐ ಸಂತೋಷ ಹಳ್ಳೂರ, ಉಪಾಧ್ಯಕ್ಷ ರಮೇಶ ಬಾದವಾಡಗಿ, ಕಾರ್ಯದರ್ಶಿ ಶಿವಕುಮಾರ ಅಪರಾಜ, ಖಜಾಂಚಿ ಅಜಿತ್ ಕಾಂಬಳೆ, ಜಿಲ್ಲಾ ಪ್ರತಿನಿಧಿ ವಿಜಯಕುಮಾರ ಅಡಹಳ್ಳಿ, ನಿಕಟ ಪೂರ್ವ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ, ರಾಜು ಗಾಲಿ, ಚಂದ್ರಶೇಖರ ತೆವರಟ್ಟಿ, ರಾಕೇಶ ಮೈಗೂರ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಸಂತೋಷ ಬಡಕಂಬಿ, ಶಿವಾನಂದ ಪೂಜಾರಿ, ಜಬ್ಬಾರ್ ಚಿಂಚಲಿ, ವಿಲಾಸ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಕುಮಾರ ಅಪರಾಧ ಸ್ವಾಗತಿಸಿದರು. ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ ಅಡಹಳ್ಳಿ ವಂದಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮತ್ತು 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ಸರ್ಕಾರಿ ಶಾಲೆಯ ಸುಧಾರಣೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಆದರ್ಶ ಶಿಕ್ಷಕ ಅಶೋಕ ಪೂಜಾರಿ, ಪರಿಸರ ಬೆಳವಣಿಗೆಯಲ್ಲಿ ಕರ್ತವ್ಯ ನಿಷ್ಠೆ ಮೆರೆದ ಸಾಮಾಜಿಕ ಅರಣ್ಯ ವಲಯದ ಅಧಿಕಾರಿ ಪ್ರಶಾಂತ ಗೌರಾಣಿ, ಆರೋಗ್ಯ ಮತ್ತು ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಮಹಿಳಾ ಪೌರಕಾರ್ಮಿಕ ಮಥುರಾ ಜೀರಗ್ಯಾಳ, ಆರೋಗ್ಯ ಇಲಾಖೆಯ ಸುನಂದ ಘಟಕಾಂಬಳೆ ಅವರಿಗೆ ಕಾನಿಪ ಸಂಘದಿಂದ ಸನ್ಮಾನಿಸಲಾಯಿತು. ಪತ್ರಕರ್ತರಿಗೆ ಆರೋಗ್ಯ ಮತ್ತು ಅಪಘಾತ ವಿಮೆ ಬಾಂಡ್ ವಿತರಣೆ

ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಸದಸ್ಯರಿಗೆ ಆರೋಗ್ಯ ಮತ್ತು ಅಪಘಾತ ವಿಮೆ ಬಾಂಡ್‌ಗಳನ್ನು ಶಾಸಕ ಲಕ್ಷ್ಮಣ ಸವದಿ ವಿತರಿಸಿ ಮಾತನಾಡಿ, ತಾಲೂಕಿನ ಎಲ್ಲ ಪತ್ರಕರ್ತರಿಗೆ ಆರೋಗ್ಯ ಮತ್ತು ಅಪಘಾತ ವಿಮೆ ಮಾಡಲು ಸಹಾಯಧನ ನೀಡಿದ ಸಮಾಜ ಸೇವಕಿ ಹಾಗೂ ಎಐಸಿಸಿ ವೀಕ್ಷಕರು ಹಾಗೂ ಕೆಪಿಸಿಸಿ ಸಂಯೋಜಕಿ ಸುನಿತಾ ಐಹೊಳೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಮುಕ್ತ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ

ಪತ್ರಿಕಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮುಕ್ತ ರಸಪ್ರಶ್ನೆ ಸ್ಪರ್ಧೆಯಲ್ಲಿ 2 ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು. 50 ಅಂಕಗಳಲ್ಲಿ 36 ಅಂಕಗಳನ್ನು ಪಡೆದು ಜಮಖಂಡಿ ತಾಲೂಕಿನ ಬನಹಟ್ಟಿ ಗ್ರಾಮದ ಅಶೋಕ ವಾಜಂತ್ರಿ (ಪ್ರಥಮ), ಶಿರಹಟ್ಟಿ ಗ್ರಾಮದ ಪ್ರೀತಿ ಕುರುಬರ (ದ್ವಿತೀಯ) ಹಾಗೂ ನಂದಗಾವ ಗ್ರಾಮದ ಮಂಜುನಾಥ ಗುಮಟಿ (ತೃತೀಯ) ಬಹುಮಾನ ಪಡೆದುಕೊಂಡರು. ಐದು ಜನರಿಗೆ ಸಮಾಧಾನಕರ ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿದ ಸಮಾಜ ಸೇವಕಿ ಸುನಿತಾ ಐಹೊಳಿ, ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಪರಿಸರ ಪ್ರೇಮಿ ಪ್ರಶಾಂತ ತೋಡ್ಕರ, ಸಮಾಜ ಸೇವಕಿ ಜಯಾ ಕಾಂಬಳೆ, ಉದ್ಯಮಿ ಶಾನೂರ್ ಚಿಂಚಲಿ ಅವರನ್ನು

ಸನ್ಮಾನಿಸಲಾಯಿತು.

ಕನ್ನಡಪ್ರಭ ಪತ್ರಕರ್ತ ದಿ.ಇಟ್ನಾಳಮಠಗೆ ಪುಷ್ಪ ನಮನ

ಕಳೆದ 3 ದಶಕಗಳಿಂದ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿಗಾರರಾಗಿ ಸೇವಿ ಸಲ್ಲಿಸಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ ಚನ್ನಬಸಯ್ಯ ಹಿಟ್ನಾಳಮಠ ಅವರ ಸ್ಮರಣಾರ್ಥ ಪತ್ರಿಕಾ ದಿನಾಚರಣೆಯ ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಶಾಸಕ ಲಕ್ಷ್ಮಣ ಸವದಿ ತಮ್ಮ ಮಾತುಗಳಲ್ಲಿ ದಿ.ಇಟ್ನಾಳಮಠ ಅವರ ಪತ್ರಿಕಾರಂಗದ ಸೇವೆ ಇನ್ನುಳಿದ ಪತ್ರಕರ್ತರಿಗೆ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ

ಅಥಣಿ ಮತ ಕ್ಷೇತ್ರದ ಅಭಿವೃದ್ಧಿ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಶಾಸಕ ಲಕ್ಷ್ಮಣ ಸವದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಥಣಿ ಪಟ್ಟಣದ ಟ್ರಾಫಿಕ್ ಸಮಸ್ಯೆ, ಮತಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ನೀತಿ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ, ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯಗಳ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ವಿದ್ಯಾರ್ಥಿಯರು ಕೇಳಿದ ಪ್ರಶ್ನೆಗಳಿಗೆ ಶಾಸಕ ಲಕ್ಷ್ಮಣ ಸವದಿ ಸೂಕ್ತ ಉತ್ತರಗಳನ್ನು ನೀಡುವುದರ ಜೊತೆಗೆ ಮುಂಬರುವ ದಿನಗಳಲ್ಲಿ ಅಥಣಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇನೆ. ತಾವು ಕೇಳಿರುವ ಈ ಎಲ್ಲ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶೀಘ್ರದಲ್ಲಿಯೇ ಅಥಣಿ ತಾಲೂಕಿಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ಸಂಬಂಧಪಟ್ಟ ನಿಗಮದವರಿಗೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವ ನಮ್ಮ ಪತ್ರಕರ್ತರು ಕೂಡಾ ತಮ್ಮ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

-ಲಕ್ಷ್ಮಣ ಸವದಿ, ಶಾಸಕರು.