ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಮದುವೆಯ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ಸೊಂದು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಬಸ್ಸಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿ ರಸ್ತೆಯ ಅಂಚಿನಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ ಘಟನೆ ಗುರುವಾರ ಮಾಣಿ- ಮೈಸೂರು ಹೆದ್ದಾರಿಯ ತಾಲೂಕಿನ ಕಾವು ಸಮೀಪದ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ.ಸುಳ್ಯದಿಂದ ಪೆರ್ಲಂಪಾಡಿ ಕಡೆಗೆ ಸಾಗುತ್ತಿದ್ದ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಅಮ್ಚಿನಡ್ಕದಲ್ಲಿ ತಿರುವು ಮಾರ್ಗದಲ್ಲಿ ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಮದುವೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಪರಸ್ಪರ ತೀರಾ ಅಪಾಯಕಾರಿಯಾಗಿ ಮೂಖಾಮುಖಿಯಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳಿದ್ದ ಬಸ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ರಸ್ತೆಯ ಇನ್ನೊಂದು ಬದಿಗೆ ತಿರುಗಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿ ಮನೆಯ ಗೋಡೆಗೆ ಡಿಕ್ಕಿಯಾಗಿದೆ. ಮನೆಯ ಗೋಡೆ ಮತ್ತು ಮಾಡು ಭಾಗಶಃ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಬಸ್ಸಿಗೆ ಡಿಕ್ಕಿಯಾಗುವುದನ್ನು ತಪ್ಪಿಸಿದ ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.