ಬಂಗಾರಪೇಟೆ ಅಭಿವೃದ್ಧಿಗೆ ₹ 240 ವೆಚ್ಚದ ಯೋಜನೆ

| Published : Aug 08 2025, 01:00 AM IST

ಸಾರಾಂಶ

ಬಂಗಾರಪೇಟೆಗೆ ೨೦೫೮ಕ್ಕೆ ಉದ್ದೇಶಿತ ಅನುದಾನದಲ್ಲಿ ಪಟ್ಟಣದಲ್ಲಿ ಸಿವಿಲೇಜ್ ಲೈನ್ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು,ಇದು ಕಾರ್ಯಗತವಾದರೆ ಪಟ್ಟಣದಲ್ಲಿ ಯಾವುದೇ ಚರಂಡಿ,ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುವ ಸಮಸ್ಯೆ ಇರುವುದಿಲ್ಲ. ಪಟ್ಟಣ ಅಭಿವೃದ್ದಿಗೆ ೨೩ ಕೋಟಿ ಮಂಜೂರಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ನಗರ ಮೂಲಭೂತ ಅಭಿವೃದ್ದಿ ಮತ್ತು ಹಣ ಕಾಸಿನ ನಿಗಮದಿಂದ ೨೪೦ ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ೨೦೫೮ಕ್ಕೆ ಉದ್ದೇಶಿತ ಅನುದಾನದಲ್ಲಿ ಪಟ್ಟಣದಲ್ಲಿ ಸಿವಿಲೇಜ್ ಲೈನ್ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು,ಇದು ಕಾರ್ಯಗತವಾದರೆ ಪಟ್ಟಣದಲ್ಲಿ ಯಾವುದೇ ಚರಂಡಿ,ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುವ ಸಮಸ್ಯೆ ಇರುವುದಿಲ್ಲ ಎಂದರು.

ಪಟ್ಟಣ ಅಭಿವೃದ್ದಿಗೆ ₹೨೩ ಕೋಟಿ

ಇದಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಟ್ಟಣ ಅಭಿವೃದ್ದಿಗೆ ೨೩ ಕೋಟಿ ಮಂಜೂರಾಗಿದೆ,ಈ ಹಣದಲ್ಲಿ ಪಟ್ಟಾಭಿಷೇಕೋದ್ಯಾನವನ ಅಭಿವೃದ್ದಿಗೆ ೨ಕೋಟಿ,ಅರ್ಧಕ್ಕೆ ನಿಂತಿರುವ ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಲು ೨ಕೋಟಿ ಬಾಲಕೀಯರ ಪ್ರೌಢಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ೨ಕೋಟಿ, ದೊಡ್ಡಕೆರೆ ಅಭಿವೃದ್ದಿಗೆ ೪ ಕೋಟಿ ಪ್ರಾಥಮಿಕ ಶಾಲೆಗಳ ಕಟ್ಟಡಗಳಿಗೆ ೨ಕೋಟಿ, ಚರಂಡಿಗಳ ನಿರ್ಮಾಣಕ್ಕೆ ೧೫ ಕೋಟಿ ಮಂಜೂರಾಗಿದೆ ಎಂದರು. ಪುರಸಭೆ ವ್ಯಾಪ್ತಿಯ ದೇಶಿಹಳ್ಳಿ ಸರ್ವೆ ನಂ ೧೧೫,ಕಾರಹಳ್ಳಿ ೧೯೭ರಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಈಗಾಗಲೇ ತೆರವಿಗೆ ನೋಟಿಸ್ ನೀಡಲಾಗಿದೆ. ಆದರೂ ತೆರವುಗೊಳಿಸದೆ ಕಡೆಗಣಿಸಿರುವುದರಿಂದ ತೆರವಿಗೆ ಸಭೆಯಲ್ಲಿ ಗಂಭಿರವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

2 ಕಡೆ ಮಾತ್ರ ಗಣೇಶ ಸ್ಥಾಪನೆ

ಗಣೆಶೋತ್ಸವನ್ನು ಈ ಬಾರಿ ಪ್ರತಿ ವಾರ್ಡಿನಲ್ಲಿ ಎರಡು ಕಡೆ ಮಾತ್ರ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಲು ಸಭೆ ಅನುಮೋದಿಸಿದೆ, ಎರಡಕ್ಕಿಂತ ಹೆಚ್ಚು ಕಡೆ ಸ್ಥಾಪಿಸಿದರೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಗಣೇಶ ಮೂರ್ತಿ ಸ್ಥಾಪನೆಗೆ ಅನುಮತಿ ಕಡ್ಡಾಯ. ಪರಿಸರ ಗಣೇಶೋತ್ಸವ ಆಚರಿಸಲು ಹಾಗೂ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನನ್ನು ಯಾರೂ ಸ್ಥಾಪಿಸಬಾರದು ಎಂದು ತಿಳಿಸಿದರು.

ಗುಣಮಟ್ಟದ ರಸ್ತೆ ನಿರ್ಮಾಣ

ಪಟ್ಟಣದ ಎಸ್‌ಎನ್ ರೆಸಾರ್ಟ್‌ನಿಂದ ದಿಂಬ ಗೇಟ್‌ವರೆಗೂ ಚತುಷ್ಪಥ ರಸ್ತೆ ಹಾಗೂ ದೇಶಿಹಳ್ಳಿಯಿಂದ ಆಲದ ಮರ ಮತ್ತು ಅಲ್ಲಿಂದ ಕೃಷ್ಣಾವರಂ ವರೆಗೂ ಸಹ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅನುಮೋದಿಸಿದೆ. ಎರಡೂ ಕಡೆ ಚತುಷ್ಪಥ ರಸ್ತೆ ನಿರ್ಮಾಣದಿಂದ ವಾಹನಗಳ ದಟ್ಟಣೆ ನಿವಾರಣೆಯಾಗಿ ಅಪಘಾತಗಳನ್ನು ನಿಯಂತ್ರಿಸಬಹುದು. ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಗ್ರಾಮೀಣ ರಸ್ತೆಗಳಿಗೂ ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡುವ ಎಂ ೩೦ ಗ್ರೇಡ್ ಸಿಮೆಂಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಗುಣಮಟ್ಟದ ರಸ್ತೆಗೆ ಒತ್ತು ನೀಡಲಾಗಿದೆ ಎಂದರು.