ಶ್ರೀ ಕಾಳಮ್ಮನ ಬೆಟ್ಟಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯ

| Published : Aug 08 2025, 01:00 AM IST

ಶ್ರೀ ಕಾಳಮ್ಮನ ಬೆಟ್ಟಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶ್ರೀ ಕಾಳಮ್ಮನ ಬೆಟ್ಟದಲ್ಲಿ ಮೂಲಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ತೊಂದರೆಯಾಗುತ್ತಿದ್ದು ಸೌಲಭ್ಯ ಒದಗಿಸಿಕೊಡುವಂತೆ ವಿಶ್ವಕರ್ಮ ಸಮಾಜದ ಬಂಧುಗಳು ಹಾಗೂ ಸ್ಥಳೀಯ ಗ್ರಾಮಸ್ಥರು ತಹಸೀಲ್ದಾರ್ ಮೋಹನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶ್ರೀ ಕಾಳಮ್ಮನ ಬೆಟ್ಟದಲ್ಲಿ ಮೂಲಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ತೊಂದರೆಯಾಗುತ್ತಿದ್ದು ಸೌಲಭ್ಯ ಒದಗಿಸಿಕೊಡುವಂತೆ ವಿಶ್ವಕರ್ಮ ಸಮಾಜದ ಬಂಧುಗಳು ಹಾಗೂ ಸ್ಥಳೀಯ ಗ್ರಾಮಸ್ಥರು ತಹಸೀಲ್ದಾರ್ ಮೋಹನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್ ಹಾಗೂ ವಿಶ್ವಕರ್ಮ ಸಮಾಜದ ಸರ್ವೇಶ್ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹೋಗುತ್ತಾರೆ. ಈ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿಸಿದ್ದರೂ ಮೂಲಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ವರ್ಷಗಳಿಂದಲೂ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬೆಟ್ಟದಲ್ಲಿ ಕುಡಿಯುವ ನೀರು, ಶೌಚಾಲಯ, ವಸತಿ ಗೃಹ, ಸಮುದಾಯಭವನವಿಲ್ಲದೆ ಪರದಾಡುವಂತಾಗಿದೆ. ಭಕ್ತರು ಮದುವೆ, ನಾಮಕರಣ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಮಾಡಲೆಂದು ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಆದರೆ ಸೌಲಭ್ಯವಿಲ್ಲದ ಕಾರಣ ತೀವ್ರ ತೊಂದರೆಯಾಗುತ್ತಿದ್ದು ಕೂಡಲೆ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು. ವಿಶ್ವಕರ್ಮ ಸಮಾಜದ ಭಾಸ್ಕರ್ ಮಾತನಾಡಿ, ದೇವಾಲಯಕ್ಕೆ ಭಕ್ತಾಧಿಗಳು ಹರಕೆ ರೂಪದಲ್ಲಿ ನೀಡುವ ಕಾಣಿಕೆಗಳಿಗೆ ಭದ್ರತೆಗಳಿಲ್ಲದೆ ಕಳ್ಳತನವಾಗುತ್ತಿದ್ದು ಇದಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬೆಟ್ಟದಲ್ಲಿ ಜಾತ್ರೆ, ದೇವರ ಉತ್ಸವಮೂರ್ತಿಗೆ ಉಡುಗೊರೆಯಾಗಿ ನೀಡಿದ್ದ ಹಿತ್ತಾಳೆ ಲೋಹದ ಆನೆ ಕಳ್ಳತನವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಉತ್ಸವಮೂರ್ತಿಯ ಆನೆಯನ್ನು ಪುನಃ ಮಾಡಿಸಿಕೊಡಬೇಕು. ಇಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಸುಸಜ್ಜಿತ ಸಮುದಾಯ ಭವನ ಹಾಗೂ ವಸತಿ ಗೃಹ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತರಾದ ಸ್ವಾಮಿ, ಕೆಂಪಾಚಾರ್, ಉಮೇಶ್, ಮರಿಯಾಚಾರ್, ಮಂಜುನಾಥ್ ಮತ್ತಿತರರಿದ್ದರು.