ಕಾಂಗ್ರೆಸ್‌ಗೆ ತಕ್ಕ ಪಾಠ ಗ್ಯಾರಂಟಿ: ಶಿವಶಂಕರ ಹೇಳಿಕೆ

| Published : Apr 04 2024, 01:00 AM IST

ಕಾಂಗ್ರೆಸ್‌ಗೆ ತಕ್ಕ ಪಾಠ ಗ್ಯಾರಂಟಿ: ಶಿವಶಂಕರ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿಗಳ ಗಾಳಿಯಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕೇವಲ ಕೆಲ ಸಮುದಾಯಗಳ ಓಲೈಕೆಯಲ್ಲೇ ತೊಡಗಿದೆ. ಓಲೈಕೆಯಿಂದ, ಗ್ಯಾರಂಟಿಗಳಿಂದ ರಾಜ್ಯವನ್ನಾಳಲು ಸಾಧ್ಯವಿಲ್ಲ. ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದು ಹರಿಹರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎಚ್.ಎಸ್. ಶಿವಶಂಕರ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

- ಗಾಯತ್ರಿ ಸಿದ್ದೇಶ್ವರ್‌ ಅನುಭವಿ, ತಿಳಿವಳಿಕೆ ವ್ಯಕ್ತಿತ್ವದ ಗಟ್ಟಿಗಿತ್ತಿ । ಬಿಜೆಪಿಗೆ ಜೆಡಿಎಸ್‌ ಆನೆಬಲ ತಂದಿದೆ

- ನಾಮಪತ್ರ ಸಲ್ಲಿಸುವ ರೋಡ್ ಶೋನಲ್ಲಿ ಜೆಡಿಎಸ್‌ ವರಿಷ್ಠ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭಾಗಿ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಗ್ಯಾರಂಟಿಗಳ ಗಾಳಿಯಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕೇವಲ ಕೆಲ ಸಮುದಾಯಗಳ ಓಲೈಕೆಯಲ್ಲೇ ತೊಡಗಿದೆ. ಓಲೈಕೆಯಿಂದ, ಗ್ಯಾರಂಟಿಗಳಿಂದ ರಾಜ್ಯವನ್ನಾಳಲು ಸಾಧ್ಯವಿಲ್ಲ. ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದು ಹರಿಹರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎಚ್.ಎಸ್. ಶಿವಶಂಕರ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದೆ. 2 ಬಜೆಟ್ ಮಂಡಿಸಿದರೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಬಿಡಿಗಾಸನ್ನೂ ನೀಡಿಲ್ಲ. ವಾಸ್ತವ ಹೀಗಿರುವಾಗ ಕಾಂಗ್ರೆಸ್ಸಿನವರು ಯಾವ ಮುಖ ಹೊತ್ತು ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಮತದಾರರು ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯನ್ನು ನೋಡುತ್ತಿದ್ದಾರೆಯೇ ಹೊರತು, ಕಾಂಗ್ರೆಸ್ಸಿನ ಗ್ಯಾರಂಟಿಗಳನ್ನಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ನಂತರ ದೇಶಾದ್ಯಂತ ಸಂಚಲನ ಮೂಡಿದೆ. ಉಗ್ರವಾದ, ಕೋಮುವಾದ, ಜಾತಿವಾದವನ್ನು ಹತ್ತಿಕ್ಕಿ, ದೇಶದ ಅಭಿವೃದ್ಧಿಗೆ, ರಕ್ಷಣೆಗೆ ಸಿದ್ಧವಾದ ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡಲು, ಕೆಲಸ ಮಾಡಲು ಜೆಡಿಎಸ್ ಪಕ್ಷ ತೀರ್ಮಾನಿಸಿದೆ ಎಂದು ತಿಳಿಸಿದರು.

ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ತಳಹಂತದಿಂದಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪ್ರಚಾರ ಕೈಗೊಂಡಿದ್ದಾರೆ. ಗಾಯತ್ರಿ ಅವರದ್ದು ಹಿರಿಯ ಅನುಭವ, ದೊಡ್ಡ ತಿಳಿವಳಿಕೆಯ ವ್ಯಕ್ತಿತ್ವ. ಎಲ್ಲರೊಟ್ಟಿಗೂ ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಗಟ್ಟಿಗಿತ್ತಿ ಗಾಯತ್ರಿ ಸಿದ್ದೇಶ್ವರರವರು. ಹರಿಹರ ಕ್ಷೇತ್ರದಿಂದಲೇ ಕನಿಷ್ಠ 1.25 ಲಕ್ಷ ಮತಗಳ ಲೀಡ್ ಒದಗಿಸುವ ಗುರಿ ನಮ್ಮದು ಎಂದರು.

ಗಾಯತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಉಭಯ ಪಕ್ಷಗಳಿಂದ ಐತಿಹಾಸಿಕ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದೇವೆ. ಕಾಂಗ್ರೆಸ್ಸಿನವರ ಬಳಿ ಸರ್ಕಾರವಿದೆ ಎಂದ ಮಾತ್ರಕ್ಕೆ ನಮಗೆ ಶಕ್ತಿ ಇಲ್ಲವೆಂದಲ್ಲ. ನಾವೆಲ್ಲರೂ ಮುಖಂಡರೆ. ನಮ್ಮ ಪಕ್ಷ ಬೆಂಬಲ ಘೋಷಿಸಿದ ಮೇಲೆ ಬಿಜೆಪಿಗೆ ಆನೆಯ ಬಲ ಬಂದಂತಾಗಿದೆ ಎಂದು ಶಿವಶಂಕರ್ ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಉಭಯ ಪಕ್ಷಗಳ ಮುಖಂಡರಾದ ಎಸ್.ಎಂ. ವೀರೇಶ ಹನಗವಾಡಿ, ಬಿ.ರಾಜಶೇಖರ, ಕಡತಿ ಅಂಜಿನಪ್ಪ, ಜೆ.ಅಮಾನುಲ್ಲಾ ಖಾನ್, ಗಣೇಶ ಟಿ. ದಾಸಕರಿಯಪ್ಪ, ಪರಮೇಶ್ವರ ಗೌಡ, ಕಡತಿ ಅಂಜಿನಪ್ಪ, ಕಡ್ಲೇಬಾಳು ಧನಂಜಯ, ಎ.ವೈ. ಪ್ರಕಾಶ, ಬಿ.ಎಸ್. ಜಗದೀಶ, ಅನಿಲಕುಮಾರ ನಾಯ್ಕ, ಅಣ್ಣೇಶ ಐರಣಿ, ಟಿ.ಅಸ್ಗರ್, ಬಾತಿ ಶಂಕರ, ಎಸ್.ಓಂಕಾರಪ್ಪ, ವಕೀಲ ಯೋಗೇಶ, ದೊಗ್ಗಳ್ಳಿ ವೀರೇಶ ಇತರರು ಇದ್ದರು.

- - -

ಬಾಕ್ಸ್‌

"6ರಂದು ಹರಿಹರದಲ್ಲಿ ಬಿಜೆಪಿ-ಜೆಡಿಎಸ್ ಸಭೆ "

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕನಿಷ್ಠ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಈ ಬಗ್ಗೆ ಚರ್ಚಿಸಲು ಏ.6ರಂದು ಸಂಜೆ 4 ಗಂಟೆಗೆ ಹರಿಹರದ ಶ್ರೀ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಹರಿಹರ ಕ್ಷೇತ್ರ ಮಾಜಿ ಶಾಸಕ, ಜೆಡಿಎಸ್ ನಾಯಕ ಎಚ್.ಎಸ್.ಶಿವಶಂಕರ ಹೇಳಿದರು.

ನಗರದ ಬಿಜೆಪಿ ಲೋಕಸಭಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆದೇಶದಂತೆ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಉಭಯ ಪಕ್ಷಗಳು ಹೊಂದಾಣಿಕೆಯಿಂದ ಮೈತ್ರಿಕೂಟದ ಗೆಲುವಿಗೆ ಶ್ರಮಿಸಲಿವೆ ಎಂದರು.

ಹರಿಹರದ ಸಭೆ ನಂತರ ಉಭಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಕ್ಷೇತ್ರಾದ್ಯಂತ ಪ್ರಚಾರ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಹೊಸ ಬದಲಾವಣೆಯ ಅಲೆ ಬೀಸುತ್ತಿದೆ. ಗಾಳಿಯಲ್ಲಿ ಗೆದ್ದವರಿಗೆ ಹೊಸ ಬದಲಾವಣೆಯ ಗಾಳಿ ಎಚ್ಚರಿಕೆ ನೀಡಲಿದೆ. ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ, ದೇಶದ ಅಭಿವೃದ್ಧಿ, ರಕ್ಷಣೆ, ಭದ್ರತೆಗಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶದ ರಕ್ಷಣೆ, ಅಭಿವೃದ್ಧಿಗೆ ಶ್ರಮಿಸಲೆಂದು ದೇವೇಗೌಡರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸೀಟು ಹಂಚಿಕೆ ವೇಳೆ ಒಂದಿಷ್ಟು ಗೊಂದಲ ಇದ್ದವು. ಮೂರು ಕ್ಷೇತ್ರದ ವಿಚಾರಕ್ಕೆ ಗೊಂದಲ, ಕೆಲ ನಾಯಕರಲ್ಲಿ ವ್ಯತ್ಯಾಸ ಉಂಟಾಗಿತ್ತು. ಈಗ ಎಲ್ಲ ಬಗೆ ಹರಿದಿದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದಾಗಿ ದೇಶಕ್ಕೆ ಕೆಲಸ ಮಾಡಲಿದ್ದೇವೆ. ಒಂದೇ ವೇದಿಕೆಯಲ್ಲಿ ಸಮನ್ವಯ ಸಾಧಿಸಲು ಒಪ್ಪಿಗೆ ನೀಡಿ, ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲು ಸಂದೇಶ ನೀಡಿದ್ದಾರೆ ಎಂದು ಹೇಳಿದರು.

- - -

-3ಕೆಡಿವಿಜಿ4:

ದಾವಣಗೆರೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿದರು.