ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಬೋಧಿಸಲು ಪ್ರಸ್ತಾವನೆ

| Published : Feb 11 2024, 01:54 AM IST

ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಬೋಧಿಸಲು ಪ್ರಸ್ತಾವನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಚಾರ ನಿಯಮಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದಲ್ಲಿ ಮಾದರಿ ಪಠ್ಯವಾಗಿ ಬೋಧಿಸುವಂತೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಹೇಳಿದರು.

ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಉತ್ತರ ವಿಭಾಗ (ಸಂಚಾರ)ದ ಪೊಲೀಸರು ಶನಿವಾರ ಆಯೋಜಿಸಿದ್ದ ‘ಸಂಚಾರ ಸಂಪರ್ಕ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಂಟಿ ಆಯುಕ್ತರು ಈ ವಿಷಯ ತಿಳಿಸಿದರು.

ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ 3 ತಿಂಗಳ ಹಿಂದೆಯೇ 1ರಿಂದ 10ನೇ ತರಗತಿ ವರೆಗಿನ ಶಾಲೆಯ ತರಗತಿಗೆ ಮಾದರಿ ಪಠ್ಯವಾಗಿ ಸಂಚಾರ ನಿಯಮಗಳನ್ನು ಬೋಧಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಈ ಪ್ರಸ್ತಾಪಕ್ಕೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.

ಇನ್ನು ಪ್ರತಿ ವಾರ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಸಂಚಾರ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಟ್ರಾಫಿಕ್ ಪಾರ್ಕ್‌ನಲ್ಲಿ ದಿನಕ್ಕೆ ಒಂದು ಶಾಲೆಯ 60 ಮಕ್ಕಳನ್ನು ಕರೆತಂದು 3 ಗಂಟೆಗೂ ಹೆಚ್ಚು ಕಾಲ ಸಂಚಾರ ನಿಯಮಗಳ ಕುರಿತು ತಿಳುವಳಿಕೆ ಹೇಳಲಾಗುತ್ತಿದೆ ಎಂದು ಜಂಟಿ ಆಯುಕ್ತರು ವಿವರಿಸಿದರು.

ವ್ಹೀಲಿಂಗ್ ಮಾಡಿದರೆ ಮುಲಾಜಿಲ್ಲದೆ ಕ್ರಮ:

ಇದೇ ವೇಳೆ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವ್ಹೀಲಿಂಗ್ ಮಾಡಿ ಸಿಕ್ಕಿಬೀಳುವವರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ ಅಪ್ರಾಪ್ತರಿಗೆ ಬೈಕ್ ಓಡಿಸಲು ನೀಡಿದ ತಪ್ಪಿಗೆ ಅವರ ಪೋಷಕರಿಗೆ ದಂಡ ‍ವಿಧಿಸಿ 10 ರಿಂದ 5 ಲಕ್ಷ ರು. ಮೌಲ್ಯದ ಬಾಂಡ್ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

ನಗರ ವ್ಯಾಪ್ತಿ ರಸ್ತೆಗಳಲ್ಲಿ ಬಿಬಿಎಂಪಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಹಂತ ಹಂತವಾಗಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅವಕಾಶವಾಗಲಿದೆ ಎಂದು ಆರುಹಿದರು.

ಉತ್ತರ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 16 ಜನರ ಪತ್ತೆ ಹಚ್ಚಿ ಪರಿಶೀಲಿಸಿದಾಗ ಎಲ್ಲರೂ ಅಪ್ರಾಪ್ತರಾಗಿದ್ದರು. ಆಗ ಅವರ ಪಾಲಕರಿಂದ 5 ಲಕ್ಷ ರು ವರೆಗಿನ ಬಾಂಡ್ ಓವರ್ ಪಡೆಯಲಾಗಿದೆ. ಮತ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಮಾಡಲಾಗುತ್ತದೆ. ವ್ಹೀಲಿಂಗ್ ಸಲುವಾಗಿ ಬೈಕ್‌ಗಳನ್ನು ವಿನ್ಯಾಸ ಮಾಡುತ್ತಿದ್ದ ಗ್ಯಾರೇಜ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಜಂಟಿ ಆಯುಕ್ತ ಅನುಚೇತ್ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ (ಸಂಚಾರ) ಡಿಸಿಪಿ ಡಿ.ಆರ್‌.ಸಿರಿಗೌರಿ, ಎಸಿಪಿಗಳಾದ ಪೃಥ್ವಿ ಹಾಗೂ ರಮೇಶ್, ಅಧಿಕಾರಿಗಳು ಪಾಲ್ಗೊಂಡಿದ್ದರು. ಸರಕು ಲಾರಿ ಸಂಚಾರಕ್ಕೆ ಅವಕಾಶ ಕೊಡಿ: ಮನವಿ

ಪೀಣ್ಯ ಕೈಗಾರಿಕೆ ಪ್ರದೇಶಗಳಿಗೆ ಸರಕು ಸಾಗಿಸುವ ಲಾರಿಗಳಿಗೆ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಚ್‌.ಎಂ.ಆರೀಫ್ ಮನವಿ ಮಾಡಿದರು.

ಪೀಣ್ಯ ಕೈಗಾರಿಕಾ ಪ್ರದೇಶ ವ್ಯಾಪ್ತಿ ವಾಹನ ದಟ್ಟಣೆ ಸಮಸ್ಯೆಯಾಗಿದೆ. ಕೈಗಾರಿಕೆಗಳು ಪ್ರಾರಂಭವಾಗುವ ಬೆಳಗ್ಗೆ 8 ರಿಂದ 9 ಹಾಗೂ ಮುಗಿಯುವ ಸಂಜೆ 5 ರಿಂದ 7.30 ಅವಧಿಯಲ್ಲಿ ವಾಹನ ದಟ್ಟಣೆ ಇರಲಿದೆ. ಹೀಗಾಗಿ ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳನ್ನು ಗುರುತಿಸಿ ಸಂಚಾರ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು ಎಂದು ಕೋರಿದರು.

ನೆಲಮಂಗಲ ಬಳಿಯೇ ಪೀಣ್ಯ ಕೈಗಾರಿಕಾ ವಲಯಕ್ಕೆ ಸರಕು ಸಾಗಿಸುವ ಲಾರಿಗಳನ್ನು ತಡೆಯಲಾಗುತ್ತಿದೆ. ಪೀಣ್ಯ ಕೈಗಾರಿಕೆಗಳ ಬಿಲ್ ಹೊಂದಿರುವ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆರೀಫ್ ವಿನಂತಿಸಿದರು.