ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಶೀಘ್ರ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯದಿಂದ ಪ್ರಸ್ತಾವನೆ ಸಲ್ಲಿಸುವುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಹೇಳಿದರು.ಪಟ್ಟಣದ ಎಂ.ಎಂ.ಪಾರ್ಟಿ ಸಭಾಂಗಣದಲ್ಲಿ ಬುಧವಾರ ಸಂಜೆ ಮದ್ದೂರು ವಕೀಲರ ಸಂಘದ 2025ನೇ ಸಾಲಿನ ದಿನಚರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಟ್ಟಣದ ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ಹೊಸ ನ್ಯಾಯಾಲಯ ಕಟ್ಟಡ, ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕೆ 4.30 ಗುಂಟೆ ಜಮೀನನ್ನು ಮಂಜೂರು ಮಾಡಿದೆ ಎಂದರು. ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಹೈಕೋರ್ಟ್ ರಿಜಿಸ್ಟರ್ ಅವರಿಂದ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ನ್ಯಾಯಾಲಯ ಸ್ಥಾಪನೆ ಸಂಬಂಧ ಮದ್ದೂರು ಮತ್ತು ಮಳವಳ್ಳಿ ವಕೀಲರ ಸಂಘದಿಂದ ಸಾಕಷ್ಟು ಒತ್ತಡಗಳು ಬರುತ್ತಿವೆ. ಈ ಬಗ್ಗೆ ಎರಡು ಸಂಘಗಳು ಒಮ್ಮತದಿಂದ ಸಹಕಾರ ನೀಡಿದರೆ ಜಿಲ್ಲಾ ನ್ಯಾಯಲದ ಸ್ಥಾಪನೆಗೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ವಕೀಲರು ತಮ್ಮ ವೃತ್ತಿಯಲ್ಲಿ ಪರಿಣಿತಿ ಹೊಂದಬೇಕು, ನ್ಯಾಯಾಲಯಗಳಲ್ಲಿ ಹೊಸದಾಗಿ ಅಳವಡಿಸಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಪರಿಣಿತಿ ಪಡೆದುಕೊಳ್ಳಬೇಕು. ವಕೀಲರು ತಮ್ಮ ವೃತ್ತಿಯ ಜೊತೆಗೆ ನ್ಯಾಯಾಂಗದ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆ ಹೊಂದುವ ಮೂಲಕ ನ್ಯಾಯಾಧೀಶರ ಹುದ್ದೆಗೆ ಬರಲು ಪ್ರಯತ್ನ ನಡೆಸಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ತಂದು ತಮ್ಮ ಶಾಸಕತ್ವದ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ವಕೀಲರ ಸಂಘದ ವಿದ್ಯುತ್ ಶುಲ್ಕ ಬಾಕಿ ಸಮಸ್ಯೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಇತ್ಯರ್ಥ ಪಡಿಸುವುದಾಗಿ ಆಶ್ವಾಸನೆ ನೀಡಿದರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಮದ್ದೂರು ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಎನ್.ಬಿ. ಮೋಹನ್ ಕುಮಾರಿ, ಎಸ್.ಸಿ.ನಳಿನ, ಎನ್.ವಿ.ಕೋನಪ್ಪ ಹಾಗೂ ಎಸ್.ಪಿ.ಕಿರಣ್, ಹಿರಿಯ ವಕೀಲರಾದ ಎಚ್.ಮಾದೇಗೌಡ, ಟಿ.ನಾಗರಾಜು ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಂ.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ವಕೀಲ ಚೆಲುವರಾಜು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.ವಕೀಲರ ಸಂಘದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಕೀಲರುಗಳಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.