ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಆಪರೇಷನ್ ಸಿಂದೂರ ಬೆಂಬಲಿಸಿ, ಭಾರತ ಸೇನೆಗೆ ಅಭಿನಂದಿಸಿ ಬುಧವಾರ ನಗರದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.ನಗರದ ಅಂಬೇಡ್ಕರ್ ವೃತ್ತದಿಂದ ಹೊರಟ ನೂರಾರು ವಿದ್ಯಾರ್ಥಿಗಳು ಬೃಹತ್ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದರು, ದಾರಿಯುದ್ದಕ್ಕೂ ಸೇನೆ, ಭಾರತದ ಪರ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಅರ್ಧ ಕಿ.ಮೀ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿದ ವಿದ್ಯಾರ್ಥಿಗಳ ದಂಡು ಸಾರ್ವಜನಿಕರ ಗಮನ ಸೆಳೆಯಿತು, ನಗರದ ವಿವಿಧ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಬಸವೇಶ್ವರ ವೃತ್ತ, ಜಡಗಣ್ಣ ಬಾಲಣ್ಣ ವೃತ್ತ, ಕಲ್ಮೇಶ್ವರ ಚೌಕ, ಗಾಂಧಿ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಶಿವಾಜಿ ಸರ್ಕಲ್ ತಲುಪಿತು. ನಂತರ ನಡೆದ ಸಭೆಯಲ್ಲಿ ಬಿಜೆಪಿ ಯುವ ಧುರೀಣ ಅರುಣ ಕಾರಜೋಳ ಇತರರು ಮಾತನಾಡಿ ಆಪರೇಶನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ತೋರಿಸಿದ ಸಾಹಸವನ್ನು ಕೊಂಡಾಡಿದರು.
ನಿವೃತ್ತ ಮೇಜರ್ ಅಪ್ಪಾಸಾಹೇಬ ನಿಂಬಾಳ್ಕರ್ ಮಾತನಾಡಿ, ದೇಶದ ಸೈನಿಕರು ನಮಗಾಗಿ ಹಗಲು ರಾತ್ರಿ ಎನ್ನದೇ ಗಡಿ ಕಾಯುತ್ತಿರುತ್ತಾರೆ, ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸರಕಾರಗಳು ಶ್ರಮಿಸಿವೆ. 26 ಜನ ಮಹಿಳೆಯರ ಕುಂಕುಮ ಅಳಿಸಿದ ಉಗ್ರರ ಹತ್ಯೆ ಮಾಡಲು ಆಪರೇಷನ್ ಸಿಂದೂರ ನಡೆಸಲಾಗಿದೆ, ಪಾಕ್ ಪ್ರಜೆಗಳಿಗೆ ತೊಂದರೆಯಾಗದಂತೆ ಉಗ್ರರ ತಾಣ ಮಾತ್ರ ಧ್ವಂಸಗೊಳಿಸಲಾಗಿದೆ ಎಂದರು.ಗುರುಪಾದ ಕುಳಲಿ ಮಾತನಾಡಿ, ದೇಶದ ಸೈನಿಕರಿಗೆ ಆತ್ಮಸ್ಥೆರ್ಯ, ಬೆಂಬಲ ನೀಡುವ ಮೂಲಕ ನಾವೆಲ್ಲ ಸೈನಿಕರು, ಸೇನೆ ಹುರಿದುಂಬಿಸೋಣ, ಸೈನಿಕರಿಗೆ ಅಭಿನಂದನೆ ಸಲ್ಲಿಸೋಣ ಎಂದರು.
ನಿವೃತ್ತ ಕ್ಯಾಪ್ಟನ್ ವಸಂತ ಬಡಿಗೇರ, ಧರೆಪ್ಪ ಸಾಂಗಲಿಕರ, ವೆಂಕಣ್ಣ ಕಳ್ಳಿಗುದ್ದಿ ಇತರರು ಮಾತನಾಡಿದರು.ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರ ಮಂಡಳ ಅಧ್ಯಕ್ಷ ಕೆ.ಎಸ್.ಹಿರೇಮಠ, ಆರ್.ಟಿ. ಪಾಟೀಲ, ಕೆ.ಆರ್. ಮಾಚಪ್ಪನವರ, ಹನಮಂತ ತುಳಸಿಗೇರಿ, ರಾಜು ಯಡಹಳ್ಳಿ, ಡಾ.ರವಿ ನಂದಗಾಂವ, ಸದಾಶಿವ ತೇಲಿ, ಶ್ರೀಶೈಲ ಚಿಣ್ಣನವರ, ಪ್ರಕಾಶ ವಸ್ತ್ರದ, ದುಂಡಪ್ಪ ಇಟಕನ್ನವರ, ಲಕ್ಷ್ಮಣ ಚಿಣ್ಣನವರ, ಬಸವರಾಜ ಮಳಲಿ, ಸದಾಶಿವ ಇಟಕನ್ನವರ, ಶ್ರೀಕಾಂತ ಗುಜ್ಜನ್ನವರ, ಪ್ರಕಾಶ ಚಿತ್ತರಗಿ, ಪ್ರದೀಪ ನಿಂಬಾಳ್ಕರ್, ಸದಾಶಿವ ಮುಳ್ಳೂರ, ನಜೀರ್ ಪಠಾಣ, ಸೋನಾಪ್ಪಿ ಕುಲಕರ್ಣಿ, ಕಲ್ಮೇಶ ಗೋಸಾರ, ಪ್ರಕಾಶ ರಾಮತೀರ್ಥ, ಸಾಹೇಬಲಾಲ ನದಾಫ್, ರಾಜೇಂದ್ರ ಟಂಕಸಾಲಿ, ರುದ್ರಪ್ಪ ಅಡವಿ, ಮಹ್ಮದ ಶೇಖ್, ರಂಗನಗೌಡ ಪಾಟೀಲ, ಶಬ್ಬೀರ್ ಮುಲ್ಲಾ, ಶ್ರೀಶೈಲಗೌಡ ಪಾಟೀಲ, ಅನುಪ್ ಚೌಹಾಣ್, ಸುಭೇದಾ ಮಾನೆ, ವನಜಾಕ್ಷಿ ಮಂಟೂರ, ಶಫೀಕ್ ಪಠಾಣ, ಬಂಡು ಘೋರ್ಪಡೆ, ಭೀಮ ಕುಮಕಾಲೆ, ಬಸಪ್ಪ ಹ್ಯಾವಗಲ್ ಹಾಗೂ ಮುಖಂಡರು, ಮಾಜಿ ಯೋಧರ ಸಂಘದ ಸದಸ್ಯರು, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ನಾಗರಿಕರು ತಿರಂಗಾ ಯಾತ್ರೆಯಲ್ಲಿ ಇದ್ದರು.
ನಿಮ್ಮ ಪುತ್ರನಿಗೆ ಮಂತ್ರಿ ಮಾಡಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಪಕ್ಷವನ್ನು ಓಲೈಸಲು ದೇಶದ ವೀರ ಯೋಧರ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ, ದೇಶಕ್ಕಾಗಿ ನೀವು ಏನು ಮಾಡಿದ್ಧೀರಿ ಎಂಬುದನ್ನು ಖರ್ಗೆ ಅವರು ಹೇಳಬೇಕು. ಗಡಿಯಲ್ಲಿರುವ ವೀರ ಯೋಧರು ದೇಶ ಕಾಯುತ್ತಿರುತ್ತಾರೆಯೋ ಅಲ್ಲಿವರೆಗೆ ನಾವು ಸುರಕ್ಷಿತವಾಗಿ ಇರುತ್ತೇವೆ ಎಂಬುದನ್ನು ಅರಿಯಲಿ.- ಅರುಣ ಕಾರಜೋಳ ಬಿಜೆಪಿ ಯುವ ಧುರೀಣ